ಕಲಬುರಗಿ: ಪ್ರಶಾಂತ ನಗರದ ಶ್ರೀ ಹನುಮಾನ ಮಂದಿರದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರ ಆರಾಧನೆ ಮಹೋತ್ಸವ ಭಕ್ತಿಭಾವದಿಂದ ಬುಧವಾರ ಆಚರಿಸಲಾಯಿತು.
ಬೆಳಗ್ಗೆ ಪ್ರಾಣದೇವರಿಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ನಡೆಯಿತು. ಬಳಿಕ ಶ್ರೀ ವಿಜಯರಾಯರ ಕವಚ ಪಾರಾಯಣ, ಭಜನೆ, ದಾಸರ ಭಾವಚಿತ್ರಕ್ಕೆ ಪೂಜೆ ಹಾಗೂ ದೀಪೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಪರವಶರಾದರು.
ಅರ್ಚಕ ಗುಂಡಾಚಾರ್ಯ ಜೋಶಿ ನರಿಬೋಳ ಮಾತನಾಡಿ, ದಾಸಸಾಹಿತ್ಯದ ಬೆಳವಣಿಗೆಯಲ್ಲಿ ಶ್ರೀ ವಿಜಯದಾಸರ ಕೊಡುಗೆ ಅಪಾರವಾಗಿದೆ. ಪುರಂದರದಾಸರ ನಂತರ ದಾಸಸಾಹಿತ್ಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದ ಮಹನೀಯರಲ್ಲಿ ವಿಜಯದಾಸರು ಪ್ರಮುಖರು. ಗೋಪಾಲದಾಸರು, ಜಗನ್ನಾಥದಾಸರು, ಕಲ್ಲೂರು ಸುಬ್ಬಣ್ಣಾಚಾರ್ಯರು ಸೇರಿ ಅನೇಕ ಹರಿದಾಸರಿಗೆ ಮಾರ್ಗದರ್ಶನ ನೀಡಿದ ಮಹಾಮಹಿಮರು ಎಂದು ಬಣ್ಣಿಸಿದರು.
ನರಸಿಂಹಾಚಾರ್ಯ ಅಗ್ನಿಹೋತ್ರಿ, ಗೋಪಾಲರಾವ ತೆಂಗಲಿ, ಮಾಧವಾಚಾರ್ಯ ಗುಡಿ, ಪುರುಷೋತ್ತಮ ಮಠ, ವಿಜಯಕುಮಾರ, ಶಾಮರಾವ ಕುಲಕರ್ಣಿ, ಗುರುರಾಜ ಭಂಕೂರ ಇತರರಿದ್ದರು.
ವಿಜಯದಾಸರು ಅನೇಕ ಸುಳಾದಿ ರಚಿಸುವುದರ ಜತೆಗೆ ಭಗವಂತನ ನಾಮಸ್ಮರಣೆಯ ಮಹತ್ವ ಸಾರುವ ಕೀರ್ತನೆಗಳನ್ನು ರಚಿಸಿದ್ದಾರೆ. ಕಠಿಣವಾದ ವ್ಯಾಸಸಾಹಿತ್ಯದ ತತ್ವಗಳನ್ನು ಸರಳವಾದ ದಾಸಸಾಹಿತ್ಯದ ಮೂಲಕ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ತಿಳಿಸಿಕೊಟ್ಟಿದ್ದಾರೆ. ಅವರ ಸಾಹಿತ್ಯ ಹಾಗೂ ಆಧ್ಯಾತ್ಮಿಕ ಸಂದೇಶ ಇಂದಿಗೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿವೆ.> ಗುಂಡಾಚಾರ್ಯ ಜೋಶಿ ನರಿಬೋಳ, ಅರ್ಚಕ