ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿಯಲ್ಲಿ ವಸತಿನಿಲಯ ಉಸ್ತುವಾರಿಗಳಿಗೆ ಬುಧವಾರ ಆಯೋಜಿಸಿದ್ದ ಕಾರ್ಯಾಗಾರಕ್ಕೆ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಬಸವರಾಜ ಕುಬಕಡ್ಡಿ ಚಾಲನೆ ನೀಡಿದರು. ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಾಯಕ ಡೀನ್ ಡಾ.ಮಲ್ಲಿಕಾರ್ಜುನ್ ಹೂಗಾರ್, ಸಂಪನ್ಮೂಲ ವ್ಯಕ್ತಿಗಳಾದ ಉತ್ತರ ಯು.ವಿ, ಸಂದೇಶ್ ಜೆ.ಆರ್ ಇದ್ದರು.
- ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ.ಕುಬಕಡ್ಡಿ ಹೇಳಿಕೆ
- ಸಿಯುಕೆ ಹಾಸ್ಟೇಲ್ ಮೇಲ್ವಿಚಾರಕರ ಕಾರ್ಯಾಗಾರ
ಕಲಬುರಗಿ: ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿ, ಸುರಕ್ಷತೆ ಮತ್ತು ಯೋಗಕ್ಷೇಮ ವಿಚಾರಿಸುವಲ್ಲಿ ಹಾಸ್ಟೆಲ್ ಕೇರ್‌ಟೇಕರ್‌ಗಳ ಪಾತ್ರ ಅತ್ಯಂತ ಪ್ರಮುಖ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ.ಬಸವರಾಜ ಕುಬಕಡ್ಡಿ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ವತಿಯಿಂದ ಹಾಸ್ಟೇಲ್ ಕೇರ್‌ಟೇಕರ್ (ವಸತಿಗೃಹ ಉಸ್ತುವಾರಿ) ಗಳಿಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ: ಜಾಗೃತಿ, ಗುರುತಿಸುವಿಕೆ ಮತ್ತು ಪ್ರತಿಕ್ರಿಯೆ ಎಂಬ ವಿಷಯ ಕುರಿತು ಬುಧವಾರ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ವಿವಿಯಲ್ಲಿ ಜಮ್ಮು ಕಾಶ್ಮೀರದಿಂದ - ಕನ್ಯಾಕುಮಾರಿವರೆಗೆ ದೇಶದ ಎಲ್ಲ ಭಾಗಗಳಿಂದ ವಿದ್ಯಾರ್ಥಿಗಳು ಸಿಯುಕೆ ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ವಿಭಿನ್ನ ಭಾಷೆ, ಸಂಸ್ಕೃತಿ, ಆಹಾರ ಪದ್ದತಿ ಹಾಗೂ ವಿವಿಧ ಸಾಮಾಜಿಕ ಹಿನ್ನೆಲೆ ಹೊಂದಿರುತ್ತಾರೆ. ಇಂತಹ ಬಹುಸಂಸ್ಕೃತಿಕ ವಸತಿ ನಿಲಯಗಳ ವಾತಾವರಣದಲ್ಲಿ ನಮ್ಮ ಹಾಸ್ಟೆಲ್ ಕೇರ್‌ಟೇಕರ್‌ಗಳು ಆಡಳಿತಾತ್ಮಕ ಜವಾಬ್ದಾರಿ ನಿರ್ವಹಿಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ, ಸಲಹೆಗಾರ ಹಾಗೂ ಪೋಷಕರಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಸದಾ ವಿದ್ಯಾರ್ಥಿಗಳೊಂದಿಗೆ ಅತ್ಯಂತ ಸಹಾನುಭೂತಿ, ಗೌರವಯುತವಾಗಿ ವರ್ತಿಸುವಂತೆ ಹಾಗೂ ಅವರಿಗೆ ಸುಲಭವಾಗಿ ಲಭ್ಯವಿರುವಂತೆ ಪ್ರಯತ್ನ ಮಾಡಬೇಕು. ವಿಶೇಷವಾಗಿ ಹಾಸ್ಟೆಲ್ ವಿದ್ಯಾರ್ಥಿಗಳು ಕಾಲೇಜಿನ ತರಗತಿಗಳ ಸಂದರ್ಭದಲ್ಲಿ ಕಡ್ಡಾಯವಾಗಿ ಅವರ ಹಾಜರಾತಿ ಪರಿಶೀಲಿಸುವುದು, ರಾತ್ರಿ ಸಂದರ್ಭದಲ್ಲಿ ಹಾಸ್ಟೇಲ್‌ಗಳಲ್ಲಿ ಸುರಕ್ಷತೆ ಮತ್ತು ಯೋಗಕ್ಷೇಮ, ಉಪಸ್ಥಿತಿ ಖಚಿತಪಡಿಸಿಕೊಳ್ಳುವುದು, ಅವರ ದೈಹಿಕ ಅಥವಾ ಮಾನಸಿಕ ಆರೋಗ್ಯ ಸಮಸ್ಯೆ ಲಕ್ಷಣ ಕುರಿತು ಸದಾ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ನಮ್ಮ ಹಾಸ್ಟೇಲ್‌ಗಳ ಆಹಾರದ ಗುಣಮಟ್ಟ ಮತ್ತು ಪ್ರಮಾಣ, ಶುಚಿತ್ವ, ನೈರ್ಮಲ್ಯ, ಭದ್ರತೆ, ಆರೋಗ್ಯ ಸೇವೆ ಹಾಗೂ ಇತರ ಅಗತ್ಯ ಸೌಲಭ್ಯಗಳಿಗೆ ಸಂಬAಧಿಸಿದ ಸಮಸ್ಯೆ ತಕ್ಷಣ ಪರಿಹರಿಸಬೇಕು. ಸದಾ ನಿಗಾವಹಿಸಬೇಕು. ನಿಮ್ಮ ವ್ಯಾಪ್ತಿ ಮೀರಿದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.
ಸಿಯುಕೆ ಸಲಹೆಗಾರ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದ ಉತ್ತರ ಯು.ವಿ. ಮತ್ತು ಸಂದೇಶ್ ಜೆ.ಆರ್ ಅವರು, ಮಾನಸಿಕ ಆರೋಗ್ಯ ಸಮಸ್ಯೆಗಳ ಆರಂಭಿಕ ಲಕ್ಷಣ ಗುರುತಿಸುವುದು, ವಿದ್ಯಾರ್ಥಿಗಳೊಂದಿಗೆ ಪರಿಣಾಮಕಾರಿ ಸಂವಹನ ನಡೆಸುವುದು ಹೇಗೆ, ಕಠಿಣ ಸವಾಲಿನ ಸಂದರ್ಭಗಳನ್ನು ಸಹಾನುಭೂತಿಯಿಂದ ನಿರ್ವಹಿಸುವುದು ಹೇಗೆ ಹಾಗೂ ಅಗತ್ಯವಿದ್ದಾಗ ಸೂಕ್ತ ಮಾರ್ಗದರ್ಶನ ಮತ್ತು ನೆರವು ಒದಗಿಸುವ ಕುರಿತು ವಿಶೇಷವಾಗಿ ತರಬೇತಿ ನೀಡಿದರು.
ವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ಸಹಾಯಕ ಡೀನ್ ಡಾ.ಮಲ್ಲಿಕಾರ್ಜುನ್ ಹೂಗಾರ್, ಮುಖ್ಯ ಹಾಸ್ಟೇಲ್ ವಾರ್ಡನ್ ಡಾ. ಬಸವರಾಜ ಸೋಮನಮರಡಿ ಪಾಲ್ಗೊಂಡಿದ್ದರು. ವಿದ್ಯಾರ್ಥಿ ಕಲ್ಯಾಣ ಡೀನ್ ಕಚೇರಿಯ ಸಿಬ್ಬಂದಿ ಚರಣ್ ಸ್ವಾಗತಿಸಿದರು. ಅರುಣ್‌ಕುಮಾರ್ ವಂದಿಸಿದರು. ವಿದ್ಯಾರ್ಥಿಗಳ ಏಳು ವಸತಿ ನಿಲಯ ಹಾಗೂ ವಿದ್ಯಾರ್ಥಿನಿಯರ ಐದು ವಸತಿ ನಿಲಯಗಳ ಮೇಲ್ವಿಚಾರಕರು ಭಾಗವಹಿಸಿದ್ದರು.
"
ಹಾಸ್ಟೆಲ್ ಕೇರ್‌ಟೇಕರ್‌ಗಳ ಸಮರ್ಪಣೆ, ಸೂಕ್ಷö್ಮತೆ ಹಾಗೂ ಸಮಯೋಚಿತ ಬೆಂಬಲವು ವಿದ್ಯಾರ್ಥಿಗಳ ಆರೋಗ್ಯಕರ, ಸಮಾನತೆ ಆಧಾರಿತ ಮತ್ತು ವಿದ್ಯಾರ್ಥಿ ಸ್ನೇಹಿ ವಾತಾವರಣ ನಿರ್ಮಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ಪ್ರೊ.ಬಸವರಾಜ ಕುಬಕಡ್ಡಿ,ವಿದ್ಯಾರ್ಥಿ ಕಲ್ಯಾಣ ಅಧಿಕಾರಿ, ಸಿಯುಕೆ.