- ಕೃಷಿ ಹೊಂಡದಿಂದ ಯುವಕರ ಮೃತದೇಹ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ
ಸೇಡಂ:(ಕಲಬುರಗಿ) ತಾಲೂಕಿನ ಮುಗನೂರು ಗ್ರಾಮದ ಓರ್ವ ಯುವಕ ಮತ್ತು ಓರ್ವ ಬಾಲಕ ಶನಿವಾರ ಮಧ್ಯಾಹ್ನ ಆಕಳುಗಳನ್ನು ಮೇಯಿಸಲು ಹೊಲಕ್ಕೆ ಹೋದಾಗ ಕೃಷಿ ಹೊಂಡದ ನೀರಿನಲ್ಲಿ ಇಬ್ಬರು ಮುಳುಗಿ ನಾಪತ್ತೆಯಾಗಿದ್ದರು.
ನೀರಿನಲ್ಲಿ ಮುಳುಗಿದವರನ್ನು ರವೀಂದ್ರ ನಾಗಯ್ಯ ಸ್ವಾಮಿ (34) ಸದಾಶಿವ ಬಸಯ್ಯಸ್ವಾಮಿ (14) ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕೃಷಿ ಹೊಂಡದಲ್ಲಿ ಯುವಕರ ಪತ್ತೆಗಾಗಿ ಸತತವಾಗಿ ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಕೃಷಿ ಹೊಂಡದಿಂದ ಹೊರತೆಗೆದಿದ್ದಾರೆ.
ಘಟನೆಯ ವಿವರ : ಶನಿವಾರ ಆಕಳುಗಳನ್ನು ಮೇಯಿಸಲು ರವೀಂದ್ರಸ್ವಾಮಿ ಮತ್ತು ಆತನ ಅಣ್ಣನ ಮಗ ಸದಾಶಿವಸ್ವಾಮಿ ಜಮೀನಿಗೆ ತೆರಳಿದ್ದಾರೆ. ಈ ಮಧ್ಯೆ ಸದಾಶಿವಸ್ವಾಮಿ ಕೃಷಿ ಹೊಂಡದೊಳಗೆ ಈಜಲು ನೀರಿಗೆ ಇಳಿದಿದ್ದಾನೆ. ಈಜಲು ಬಾರದೇ ನೀರಿನೊಳಗೆ ಆಳಕ್ಕೆ ತೆರಳಿದ್ದಾನೆ. ಇದನ್ನು ಗಮನಿಸಿದ ರವೀಂದ್ರಸ್ವಾಮಿ ಸದಾಶಿವಸ್ವಾಮಿಯ ರಕ್ಷಣೆಗಾಗಿ ತನೂ ನೀರಿಗೆ ಹಾರಿದ್ದಾನೆ. ನೀರಿನಿಂದ ಹೊರಬರಲಾಗದೆ ಇಬ್ಬರು ನೀರಿನೊಳಗೆ ಮುಳುಗಿದ್ದಾರೆ. ನೀರಲ್ಲಿ ಮುಳುಗುತ್ತಿದ್ದ ಅಣ್ಣನ ಮಗನ ರಕ್ಷಣೆಗೆ ತೆರಳಿದ ರವೀಂದ್ರಸ್ವಾಮಿ ತಾನು ಕೂಡ ನಿರುಪಾಲಾಗಿದ್ದಾನೆ.