ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ ಅಭಿಪ್ರಾಯ
ಕಲಬುರಗಿಯಲ್ಲಿ ವಿಶ್ವ ಟೂರಿಸಂ ದಿನ
ಕಲಬುರಗಿ: ಜಿಲ್ಲೆಯ ಪ್ರವಾಸೋದ್ಯಮ ರಂಗ ಸೊರಗಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಉದ್ಯಮಿಗಳ ನಡುವಿನ ಸಮನ್ವಯದ ಕೊರತೆ ಮುಖ್ಯ ಕಾರಣ ಎಂದು ರಾಜ್ಯ ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷ ಸತ್ಯನಾಥ ಶೆಟ್ಟಿ ಅಭಿಪ್ರಾಯಪಟ್ಟರು.
ಖಾಸಗಿ ಹೋಟೆಲ್ನಲ್ಲಿ ಕರ್ನಾಟಕ ಪ್ರವಾಸೋದ್ಯಮ ಫೋರಂನ ಕಲ್ಯಾಣ ಕರ್ನಾಟಕ ಚಾಪ್ಟರ್ ನೇತೃತ್ವದಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಕಲಬರಗಿ ಪ್ರವಾಸೋದ್ಯಮಿಗಳ ಮತ್ತು ಪಾಲುದಾರರ ಸಭೆ ಉದ್ಘಾಟಿಸಿ ಮಾತನಾಡಿ, ಪ್ರವಾಸೋದ್ಯಮ ರಂಗದಲ್ಲಿ ಕಲಬುರಗಿ ಕೋಟೆ, ಶರಣಬಸವೇಶ್ವರ ದೇಗುಲ, ಖಾಜಾ ಬಂದೇ ನವಾಜ್ ದರ್ಗಾ, ದೇವಲಗಾಣಗಾಪುರ, ಮಳಖೇಡ, ಸನ್ನತಿ ಸೇರಿ ಹಲವು ದೇಗುಲ ಹಾಗೂ ಶಿಲ್ಪಕಲಾ ವೈಭವದ ವೈಶಿಷ್ಠತೆಯ ಅನೇಕ ತಾಣಗಳಿದ್ದರೂ ಪ್ರವಾಸಿಗರನ್ನು ಸೆಳೆಯಲು ಹಿಂದೆ ಬಿದ್ದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಹೋಟೆಲ್, ವಸತಿಗೃಹಗಳಿಗೆ ಪರವಾನಗಿ ಸರಳೀಕರಣ, ವ್ಯವಹಾರದ ಮೇಲೆ ವಿಧಿಸುವ ಕಠಿಣ ನಿಯಮಗಳ ಸಡಿಲಿಕೆ, ಮನರಂಜನಾ ಪ್ರದರ್ಶನದ ವೇಳೆ ಅವಧಿ ವಿಸ್ತರಣೆ ಜತೆಗೆ ಪಾಲುದಾರ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡಿದ್ದಲ್ಲಿ ಪ್ರವಾಸೋದ್ಯಮ ೇತ್ರದಲ್ಲಿ ಪ್ರ ಪ್ರಗತಿ ಹೊಂದಲು ಸಾಧ್ಯ. ಉದ್ಯೋಗ ಸೃಷ್ಟಿ ಜತೆಗೆ ವ್ಯವಹಾರ ಪ್ರಗತಿಯೊಂದಿಗೆ ಈ ಭಾಗದ ಆರ್ಥಿಕ ಬೆಳವಣಿಗೆ ಸಾಧ್ಯ ಎಂದರು.
ಕರ್ನಾಟಕ ಟೂರಿಸಂ ಫೋರಂ ಅಧ್ಯಕ್ಷ ಪ್ಯಾಟ್ರಿಕ್ ಜಾರ್ಜ್ ಮಾತನಾಡಿ, ದೇಗುಲ, ಕಲಾ, ಸಾಂಸ್ಕೃತಿಕ, ಆಹಾರ ಹಾಗೂ ವೆಲ್ನೆಸ್ ಟೂರಿಸಂ ಮೂಲಕ ಈ ಭಾಗದ ಸ್ಥಳಿಯ ಮಹತ್ವಗಳಿಗೆ ಪ್ರವಾಸೋದ್ಯಮದ ಸ್ಪರ್ಷ ನೀಡಿ ಅಭಿವೃದ್ಧಿ ಹೊಂದುವಂತೆ ಮಾಡಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಯೋಜನೆ ಸಿದ್ಧಪಡಿಸಲು ಸಲಹೆ ನೀಡಲಾಗುತ್ತಿದೆ. ಮೈಸೂರು, ಕರಾವಳಿ, ಹಂಪಿ, ಬಾದಾಮಿ ಇತರ ಕಡೆಗಳಲ್ಲಿ ಪ್ರವಾಸೋದ್ಯಮ ಬೆಳೆದಂತೆ ಈ ಭಾಗಕ್ಕೂ ನೂತನ ಪ್ರವಾಸೋದ್ಯಮ ನೀತಿ ಅಗತ್ಯವಿದೆ. ಮೊದಲ ಬಾರಿಗೆ ಕಲಬುರಗಿಯಲ್ಲಿ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶೈಣಿಕ ಪ್ರವಾಸ ಹಮ್ಮಿಕೊಂಡಿರುವುದು ದಾಖಲೆ ಎಂದರು.
ಕಲ್ಯಾಣ ಕರ್ನಾಟಕ ಚಾಪ್ಟರ್ ಸಂಯೋಜಕ ಸಂದೀಪ್ರಾಜ್ ಪ್ರಾಸ್ತಾವಿಕ ಮಾತನಾಡಿ, ಈ ಭಾಗದ ಪ್ರವಾಸಿ ರಂಗದ ಸಮಗ್ರ ಅಭಿವೃದ್ಧಿಗೆ ಪ್ರವಾಸೋದ್ಯಮವೇ ಬೆನ್ನೆಲುಬು. ಇದರ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.
ಡಾ.ಸದಾನಂದ ಪೆರ್ಲ, ವಿನಯ್, ವಿನುತ್, ರವೀಂದ್ರ, ನಾಗರಾಜ ಸುಳೆಗಾರ, ಅಭಿಷೇಕ ಬೀದರ್, ಸೈಯದ್ ಅಬ್ದುಲ್ ರೌಫ್ ಖಾದ್ರಿ, ಮಹೇಶ ಕಡೇಚೂರ್ ಇತರರಿದ್ದರು.
ಕಲಬುರಗಿ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಯಾದರೆ ಈ ಭಾಗದ ನಿರುದ್ಯೋಗ ಸಮಸ್ಯೆ ಕೊನೆಗೊಂಡು ವಲಸೆ ಹೋಗುವುದು ತಪ್ಪಿಸಬಹುದು. ಕಲಬುರಗಿ ಕೇಂದ್ರೀಕರಿಸಿ ಹೆಲಿ ಟೂರಿಸಂ ಆರಂಭಕ್ಕೆ ಉತ್ತಮ ಅವಕಾಶವಿದೆ. ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅನುಷ್ಠಾನಗೊಳ್ಳಬೇಕು.> ಡಾ.ಸದಾನಂದ ಪೆರ್ಲ, ವಿಶ್ರಾಂತ ಕಾರ್ಯಕ್ರಮ ಮುಖ್ಯಸ್ಥ, ಆಕಾಶವಾಣಿ