Zoo in kalaburagi 
ಕಲಬುರಗಿ

ಕಲಬುರಗಿಗೆ ತಿಂಗಳ ಕೊನೆಗೆ ಬರಲಿವೆ ಹುಲಿ, ಸಿಂಹ: ಸಚಿವ ಪ್ರಿಯಾಂಕ್ ಖರ್ಗೆ

ಪ್ರಮುಖ ಮುಖ್ಯಾಂಶಗಳು

  • 42 ಎಕರೆಯಲ್ಲಿ ಬೃಹತ್ ಮೃಗಾಲಯ ಕಾರ್ಯಾರಂಭ ಶೀಘ್ರ
  • ಮೇ 12ರಂದು ಅರಣ್ಯ ಸಚಿವರಿಂದ ಸಾಂಕೇತಿಕವಾಗಿ ಉದ್ಘಾಟನೆ
ಕಲಬುರಗಿ: ಚಿತ್ತಾಪುರ ತಾಲೂಕಿ‌ನ ಮುಡಬೂಳ ಗ್ರಾಮದ ಬಳಿ 6.33 ಎಕರೆ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾದ ಮೃಗಾಲಯ ಹಾಗೂ ಮಕ್ಕಳ ಉದ್ಯಾನವನ‌ ಶೀಘ್ರ ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಮೇ 12ಕ್ಕೆ ಬನ್ನೇರುಘಟ್ಟದಿಂದ ಸಿಂಹ ಬರಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಅರಿವಿನ ಮನೆಯಲ್ಲಿ ಮೃಗಾಲಯದ ಲೋಗೋ, ವಿಡಿಯೋ ಬಿಡುಗಡೆ ಮಾಡಿ, ಮಾತನಾಡಿ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಸೆಕ್ಷನ್ 38(1) ಅಡಿಯಲ್ಲಿ ಮೃಗಾಲಯ ಸ್ಥಾಪನೆಗೆ ಕೇಂದ್ರ ಮೃಗಾಲಯ ಪ್ರಾಧಿಕಾರದಿಂದ ಅನುಮತಿ‌ ಪಡೆಯಲಾಗಿದೆ ಎಂದರು.
ಕಲಬುರಗಿ ಮೃಗಾಲಯ: ಚಿತ್ತಾಪುರ (ಕಳಗಿ) ತಾಲ್ಲೂಕಿನ ಮಡಬೂಳ ಗ್ರಾಮದಲ್ಲಿ 42 ಏಕರೆ 38 ಗುಂಟೆ ಜಾಗದಲ್ಲಿ ಮೃಗಾಲಯ ಸ್ಥಾಪಿಸಲಾಗಿದೆ.
ಎಲ್ಲ ಸಂಸ್ಥೆಗಳಿಂದ ಅನುಮತಿ ಪಡೆಯಲಾಗಿದೆ. ಸಕಲ ಸೌಲಭ್ಯ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಕಲ್ಪಿಸಲಾಗಿದೆ. ಆಸ್ಪತ್ರೆ ಹಾಗೂ ಅಡುಗೆಮನೆ ಕಟ್ಟಡಗಳು ಅಗತ್ಯ ಔಷಧಿ ಮತ್ತು ಸ್ಟೆಚರ್, ಫ್ರೀಜರ್ ಮುಂತಾದ ಉಪಕರಣಗಳೊಂದಿಗೆ ಸಜ್ಜುಗೊಂಡಿವೆ ಎಂದು ಹೇಳಿದರು.
ಸಾರ್ವಜನಿಕ ಸೌಲಭ್ಯಗಳು - ಕುಡಿಯುವ ನೀರು, ಶೌಚಾಲಯಗಳು, ಶೆಡ್‌ಗಳು, ಬೆಂಚ್‌ಗಳು, ಉದ್ಯಾನ, ಮಕ್ಕಳ ಆಟದ ಪ್ರದೇಶ, ಸೂಚನಾ ಫಲಕಗಳು ಇತ್ಯಾದಿ.
ಮೃಗಾಲಯದಲ್ಲಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣಗಳು ನಿರ್ಮಾಣವಾಗಲಿವೆ. ನಿಶಾಚರ ಪ್ರಾಣಿಗಳು - 06, ಭಾರತೀಯ ಪಕ್ಷಿಗಳು 10, ಸಣ್ಣ ಪಕ್ಷಿಗಳು 06, ಫೀಸಂಟ್ 06, ಸಸ್ತನಿಗಳು 10, ಪ್ರೈಮೇಟ್‌ಗಳು 04, ಶಾಕಾಹಾರಿ ಪ್ರಾಣಿಗಳು 06, ಉಭಯಚರ/ಸರೀಸೃಪಗಳು 08, ಆಮೆ, ಘರಿಯಾಲ್, ಮೊಸಳೆ, ಚುಕ್ಕೆ ಜಿಂಕೆ, ಗೋಲ್ಡನ್ ಜಾಕಲ್, ಹುಲಿ, ಸಿಂಹ, ಸ್ತೋತ್ ಕರಡಿ, ಜೀಬ್ರಾ, ಬಬೂನ್, ಲಂಗೂರು ಹಾಗೂ ವಿವಿಧ ಪಕ್ಷಿಗಳಿಗಾಗಿ ಒಟ್ಟು 23 ಆವರಣಗಳು ಪೂರ್ಣಗೊಂಡಿವೆ.
ಆಮೆ, ಮೊಸಳೆ, ಇಮು, ಸಿಲ್ವರ್ ಫೀಸಂಟ್, ಗಿಳಿಗಳು, ನವಿಲುಗಳು, ಜಾಕಲ್, ಕಪ್ಪು ಗಿಡುಗಗಳು, ಲಂಗೂರು, ಕಪ್ಪು ಜಿಂಕೆ ಮೃಗಾಲಯಕ್ಕೆ ಬಂದಿವೆ ಎಂದು ಹೇಳಿದರು.
1 ತಿಂಗಳಲ್ಲಿ - ಸಿಂಹ, ಸಾಂಬರ್, ರೆಡ್ ಜಂಗಲ್ ಫೌಲ್, ಪೈಥಾನ್
3 ತಿಂಗಳಲ್ಲಿ - ಹುಲಿ, ಬಬೂನ್, ಸ್ತೋತ್ ಕರಡಿ, ಕಿಂಗ್ ಕೋಬ್ರಾ, 6 ತಿಂಗಳಲ್ಲಿ - ಜೀಬ್ರಾ, ಘರಿಯಾಲ್ ಹಾಗೂ ಇತರೆ ಪಕ್ಷಿ ಮತ್ತು ಸರೀಸೃಪ ಜಾತಿಯ ಪ್ರಾಣಿಗಳು ಬರಲಿವೆ ಎಂದು ಹೇಳಿದರು.
ಸಮಯ: ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ಇದ್ದು, ಪ್ರತಿ ಮಂಗಳವಾರ ರಜೆ ಇರಲಿದೆ.
ಪ್ರವೇಶ ಶುಲ್ಕ: 12 ವರ್ಷ ಮೇಲ್ಪಟ್ಟವರಿಗೆ- 75, 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 40 ರೂ. ಇರಲಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಭೇಟಿ - ₹25 ರೂ. ಇರಲಿದೆ ಎಂದು ಹೇಳಿದರು.
ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ್ ,ಎಂ ಎಲ್ ಸಿಗಳಾದ ಜಗದೇವ ಗುತ್ತೇದಾರ, ತಿಪ್ಪಣ್ಣಪ್ಪ ಕಮಕನೂರು, ಜೆಸ್ಕಾಂ ಚೇರ್ ಮನ್ ಪ್ರವೀಣ್ ಹರವಾಳ, ಕುಡಾ ಅಧ್ಯಕ್ಷ ಮಹಜರ್ ಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಕಮೀಷನರ್ ಅವಿನಾಶ ಶಿಂಧೆ, ಸುಮಿತ್ ಪಾಟೀಲ್ ಸೇತರಿದಂತೆ ಹಲವರಿದ್ದರು.