ಕಲಬುರಗಿಯಲ್ಲಿ ಜಿಲ್ಲಾ ಕೆಮಿಸ್ಟ್​ ಡ್ರಗ್ಗಿಸ್ಟ್​ ಅಸೋಸಿಯೇಷನ್​ ಶುಕ್ರವಾರ ಆಯೋಜಿಸಿದ್ದ ವಿಶ್ವ ಫಾರ್ಮಸಿಸ್ಟ್​ ದಿನ ಕಾರ್ಯಕ್ರಮದಲ್ಲಿ ಔಷಧ ವ್ಯಾಪಾರಿ, ಹಿರಿಯರಾದ ಪುರುಷೋತ್ತಮ ಭಟ್​ ಪೂಜಾರಿ ದಂಪತಿಯನ್ನು ಸತ್ಕರಿಸಲಾಯಿತು. ಪ್ರಹ್ಲಾದ್​ ಪೂಜಾರಿ, ರವೀಂದ್ರ ಜೋಶಿ, ವಿಜಯಕುಮಾರ ಹವಾಲ್ದಾರ, ಮೌಸಮ್​, ಶ್ರೀಕಾಂತ ಗಂಗಾ, ಮನೋಜ ಗಂಗಾ ಇತರರಿದ್ದರು. 
ಕಲಬುರಗಿ

ಫಾರ್ಮಾಸಿಸ್ಟ್​ಗಳ ಸೇವೆ ಶ್ಲಾಘನೀಯ

ಕಲಬುರಗಿ: ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿ ಸಾರಿಗೆ, ಬಸ್​, ವಸತಿ ಸೇರಿ ಹಲವು ಮೂಲಸೌಲಭ್ಯ ಕೊರತೆ ಮಧ್ಯೆಯೂ ಜನರ ಅಗತ್ಯಕ್ಕೆ ಸ್ಪಂದಿಸಿ ಔಷಧ ಸೇವೆ ಒದಗಿಸುತ್ತಿದ್ದ ಸ್ಥಳಿಯ ಫಾರ್ಮಸಿಸ್ಟ್​ಗಳ ಸೇವೆಯನ್ನು ಜಿಲ್ಲಾ ಕೆಮಿಸ್ಟ್​ ಡ್ರಗ್ಗಿಸ್ಟ್​ ಅಸೋಸಿಯೇಷನ್​ ಕಾರ್ಯದರ್ಶಿ ರವೀಂದ್ರ ಜೋಶಿ ಶ್ಲಾಘಸಿದರು.

ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ ಇಲಾಖೆ ಮತ್ತು ರಾಜ್ಯ ಫಾರ್ಮಸಿ ಕೌನ್ಸಿಲ್​ ಸಹಯೋಗದಡಿ ಮಾಜಿ ಶಾಸಕ ದಿ.ಚಂದ್ರಶೇಖರ ಪಾಟೀಲ್​ ಔಷಧ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಫಾರ್ಮಾಸಿಸ್ಟ್​ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಚೈನ್​ ಮೆಡಿಕಲ್​ ಶಾಪ್​, ಆನ್​ಲೈನ್​ ಔಷಧ ಮಾರಾಟ ಹಾಗೂ ಅತಿಯಾದ ರಿಯಾಯಿತಿ ಆಧಾರಿತ ಸ್ಪರ್ಧೆಯಿಂದ ಸ್ಥಳಿಯ ಔಷಧ ವ್ಯಾಪಾರಿಗಳು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಔಷಧ ಕ್ಷೇತ್ರ ಕೇವಲ ವ್ಯಾಪಾರದ ದೃಷ್ಟಿಕೋನಕ್ಕೆ ಸೀಮಿತವಾಗದೆ ರೋಗಿಯ ಹಿತ, ವೃತ್ತಿಪರ ನೈತಿಕತೆ ಹಾಗೂ ಜನಸೇವೆಗೆ ಆದ್ಯತೆ ನೀಡುವ ಕ್ಷೇತ್ರವಾಗಿ ಮುಂದುವರಿಯಬೇಕು ಎಂದು ಆಶಿಸಿದರು.

ಜನರು ತಮ್ಮ ಸುತ್ತಮುತ್ತಲಿನ ಔಷಧ ಅಂಗಡಿಗಳಿಗೆ ಆದ್ಯತೆ ನೀಡಿ ಅಲ್ಲಿನ ಫಾರ್ಮಾಸಿಸ್ಟ್​ಗಳ ಸೇವೆಯನ್ನು ಬೆಂಬಲಿಸಬೇಕು. ಅಗತ್ಯ ಸಂದರ್ಭದಲ್ಲಿ ಜನರಿಗೆ ತಕ್ಷಣ ಸ್ಪಂದಿಸುವ ಈ ಸ್ಥಳಿಯ ಆರೋಗ್ಯ ಸೇವಾ ವ್ಯವಸ್ಥೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಸಹಾಯಕ ಔಷಧ ನಿಯಂತ್ರಕ ಸಿ.ತೇಜಸ್ವಿ, ಸಹಾಯಕ ಔಷಧ ನಿಯಂತ್ರಕ ಸುರೇಶ ಕೆ. ಮಾತನಾಡಿದರು. ಪ್ರಹ್ಲಾದ್​ ಪೂಜಾರಿ, ವಿಜಯಕುಮಾರ ಹವಾಲ್ದಾರ, ಮೌಸಮ್​, ಶ್ರೀಕಾಂತ ಗಂಗಾ, ಮನೋಜ್​ ಗಂಗಾ ಇತರರಿದ್ದರು. ಔಷಧ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಪ್ರಾಮಾಣಿಕ, ಬದ್ಧತೆ ಹಾಗೂ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಚಿಲ್ಲರೆ ಮತ್ತು ಸಗಟು ಔಷಧ ವ್ಯಾಪಾರಿಗಳು ಹಾಗೂ ಫಾರ್ಮಾಸಿಸ್ಟ್​ಗಳನ್ನು ಸನ್ಮಾನಿಸಲಾಯಿತು. ಔಷಧ ಸೇವೆಯಲ್ಲಿ 55 ವರ್ಷ ಸುದೀರ್ ಸೇವೆ ಗುರುತಿಸಿ ಪುರುಷೋತ್ತಮ ಭಟ್​ ಪೂಜಾರಿ ದಂಪತಿಯನ್ನು ಗೌರವಿಸಲಾಯಿತು.

ಬಡವರು, ಅಗತ್ಯವಿರುವವರಿಗೆ ಅನೇಕ ಸಂದರ್ಭಗಳಲ್ಲಿ ಮಾನವೀಯ ದೃಷ್ಟಿಯಿಂದ ಸೇವೆ ಸಲ್ಲಿಸಿದ ಸ್ಥಳಿಯ ಫಾರ್ಮಾಸಿಸ್ಟ್​ಗಳು, ಇಂದಿಗೂ ಆರೋಗ್ಯ ಸೇವೆಯ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸಾರ್ಹ.
> ರವೀಂದ್ರ ಜೋಶಿ ಕಾರ್ಯದರ್ಶಿ, ಜಿಲ್ಲಾ ಕೆಮಿಸ್ಟ್​-ಡ್ರಗ್ಗಿಸ್ಟ್​ ಅಸೋಸಿಯೇಷನ್​