ಕಲಬುರಗಿ: ಬಸವಾದಿ ಶರಣರ ತತ್ವ ಸಿದ್ಧಾಂತ, ಮೌಲ್ಯ ಸರ್ವಕಾಲಕ್ಕೂ ಪ್ರಸ್ತುತವಾಗಿದೆ ಎಂದು ಗದಗ ಜಗದ್ಗುರು ತೋಂಟದಾರ್ಯ ಮಹಾಸಂಸ್ಥಾನ ಮಠದ ಶ್ರೀ ಡಾ.ಸಿದ್ಧರಾಮ ಮಹಾಸ್ವಾಮೀಜಿ ನುಡಿದರು.
ಶ್ರೀಶೈಲ ಸಾರಂಗಮಠದ ಜಗದ್ಗುರು ಡಾ.ಸಾರಂಗಧರ ದೇಶೀಕೇಂದ್ರ ಮಹಾಸ್ವಾಮಿಗಳ 12ನೇ ವರ್ಷದ ಪೀಠಾರೋಹಣ, 60ನೇ ವರ್ಧಂತಿ ಮಹೋತ್ಸವ ನಿಮಿತ್ತ ಸುಲಫಲ ಮಠದಲ್ಲಿ ಸೋಮವಾರ ರಾತ್ರಿ ಏರ್ಪಡಿಸಿದ್ದ ವಚನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಸವಾದಿ ಶರಣರ ತತ್ವ ಸಿದ್ಧಾಂತದ ಮೇಲೆ ದಾಳಿ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜನ ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಶರಣರ ಮೌಲಿಕ ತತ್ವ, ಬಸವಣ್ಣನ ಆದರ್ಶ ಮೈಗೂಡಿಸಿಕೊಳ್ಳಬೇಕು. ಸುಲಫಲ ಮಠ ಶಿವಾಚಾರ್ಯ ಪರಂಪರೆ ಮಠವಾದರೂ ಇಲ್ಲಿನ ಪೂಜ್ಯರು ಐತಿಹಾಸಿಕ, ವೈಚಾರಿಕ ಪ್ರೆ ಹೊಂದಿದ್ದಾರೆ. ಹೀಗಾಗಿ ಬಸವ ಪರಂಪರೆ ಅನುಸರಿಸಿ ಮುನ್ನಡೆಸುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಂಡು ಬಡವರು, ದೀನ-ದಲಿತರು, ತುಳಿತಕ್ಕೆ ಒಳಗಾದವರು ಹೀಗೆ ಎಲ್ಲರನ್ನು ತೆಗೆದುಕೊಂಡು ಶ್ರೀಮಠವನ್ನು ಅದ್ಭುತವಾಗಿ ಬೆಳೆಸಿದ್ದಾರೆ ಎಂದು ಕೊಂಡಾಡಿದರು.
ಶ್ರೀಶೈಲ ಸಾರಂಗಧರ ಮಠಕ್ಕೆ ಪೀಠಾಧಿಪತಿಗಳಾಗಿ 12 ವರ್ಷ ಗತಿಸಿದ್ದು, ಮಠವನ್ನು ಕಟ್ಟಿ ಬೆಳೆಸಿ ಕರ್ನಾಟಕ ಸೇರಿ ಅನೇಕ ರಾಜ್ಯದ ಯಾತ್ರಾರ್ಥಿಗಳಿಗೆ ಅನುವು ಮಾಡಿಕೊಡುವ ಮೂಲಕ ಕಾಯಕ, ದಾಸೋಹ ಪರಂಪರೆ ಅಲ್ಲೂ ಮುಂದುವರಿಸಿದ್ದು ಶ್ಲಾಘನೀಯ ಎಂದರು.
ಗೂಳುರು ಮಹಾಸಂಸ್ಥಾನದ ನಿಡುಮಾಮಿಡಿ ಜಗದ್ಗುರು ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಶ್ರೀಶೈಲ ಶಕ್ತಿ ಪೀಠ. ಇದಕ್ಕೂ ಹೆಚ್ಚಾಗಿ ಶ್ರೀಶೈಲ ಮೂಲತಃ ಶಿವ ಗಣಪತಿ ಜನ್ಮಸ್ಥಳ, ಸಾಧನಾ ಸ್ಥಳ. ಶಿವನ ಮೂಲ ಕ್ಷೇತ್ರವೂ ಹೌದು ಎಂದು ಕ್ಷೇತ್ರ ಮತ್ತು ಪರಂಪರೆಯ ಮಹತ್ವ ವಿವರಿಸಿದರು.
ಅನೇಕ ಕಷ್ಟ ಕಾರ್ಪಣ್ಯದ ಮಧ್ಯೆಯೂ ಸುಲಫಲ ಶ್ರೀಗಳನ್ನು ಸಾರಂಗಧರ ಮಠದ ಪೀಠಾಧಿಪತಿ ಸ್ಥಾನ ವಹಿಸಲಾಯಿತು. ಈಗ ಶ್ರೀಗಳು ನಿರೀಕ್ಷೆ ಮೀರಿ ಸಾರಂಗ ಮಠವನ್ನು ಅಭಿವೃದ್ಧಿಪಡಿಸಿದ್ದರಿಂದ ಅಭಿನಂದಿಸುವುದಾಗಿ ಹೇಳಿದರು.
ಗುರುಮಠಕಲ್ ಶ್ರೀ ಶಾಂತವೀರ ಮಹಾಸ್ವಾಮೀಜಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಮಲ್ಲಿಕಾರ್ಜುನ ಶಾಸಿ ಐನಾಪುರ, ಚಂದ್ರಶೇಖರ ಬೆಣ್ಣೂರು, ಮಹೇಶ ಪಟ್ಟಣ ಇತರರಿದ್ದರು. ನಿಡುಮಾಮಿಡಿ ಪೂಜ್ಯರನ್ನು ಡಾ.ಸಾರಂಗಮಠದ ಪೂಜ್ಯರು ಸತ್ಕರಿಸಿ ಅಭಿನಂದಿಸಿದರು.
ನಿಡುಮಾಮಿಡಿ ಶ್ರೀಗಳು ದೀನ ದಲಿತರ ಸಾಕ್ಷಿ ಪ್ರೆಜ್ಞೆಯಾಗಿದ್ದಾರೆ. ಓದು, ಬರವಣಿಗೆ ಮತ್ತು ಸ್ಪಷ್ಟ ನಿಲುವು ಹೊಂದಿದ್ದಾರೆ. ಮೂಢನಂಬಿಕೆ, ಕಂದಾಚಾರದ ಈ ದಿನಗಳಲ್ಲೂ ಪೂಜ್ಯರ ನಿಲುವು ಸ್ಪಷ್ಟವಾಗಿದೆ. ಡಾ.ಸಾರಂಗಧರ ಮಹಾಸ್ವಾಮಿಗಳು ಈ ನಿಲುವಿನೊಂದಿಗೆ ಉಭಯ ಮಠಗಳನ್ನು ಅಭಿವೃದ್ಧಿಪಡಿಸಿ ಭಕ್ತರಿಗೆ ಅನುಕೂಲ ಒದಗಿಸಿಕೊಟ್ಟಿದ್ದಾರೆ.> ಶ್ರೀ ನಿಜಗುಣನಾಂದ ಮಹಾಸ್ವಾಮೀಜಿ ಜಗದ್ಗುರು ತೋಂಟದಾರ್ಯ ಶಾಖಾಮಠ, ಮುಂಡರಗಿ