ಸೇಡಂ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸದಾ ಬಡ ಜನರ ಶ್ರೆಯೋಭಿವೃದ್ಧಿಗಾಗಿ ಶ್ರಮಿಸುತಿದ್ದು, ತಾಲೂಕು ಆಸ್ಪತ್ರೆಗೂ ಸಿಟಿ ಸ್ಕ್ಯಾನಿಂಗ್ ಯಂತ್ರ ಒದಗಿಸುವ ಮೂಲಕ ಆರೋಗ್ಯ ಸೇವೆ ವಿಸ್ತರಿಸಲಾಗಿದೆ ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ತಾಲೂಕು ಆಸ್ಪತ್ರೆ ಆವರಣದಲ್ಲಿ ಬುಧವಾರ ಸಿಟಿ ಸ್ಕ್ಯಾನಿಂಗ್ ಯಂತ್ರ ಲೋಕಾರ್ಪಣೆಗೊಳಿಸಿ ಮಾತನಾಡಿ, ಮತಕ್ಷೇತ್ರದಲ್ಲಿ ಆರೋಗ್ಯ ಕ್ಷೇತ್ರದ ಪ್ರಗತಿಗೆ ಈವರೆಗೂ 51 ಕೋಟಿ ರೂ.ಗೂ ಅಧಿಕ ಅನುದಾನ ಒದಗಿಸಲಾಗಿದೆ. ಇದೀಗ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಕಂಪನಿ ಸಹಕಾರದೊಂದಿಗೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸಿಟಿ ಸ್ಕ್ಯಾನಿಂಗ್ ಯಂತ್ರ ಅಳವಡಿಸುವ ಕೆಲಸ ಪೂರ್ಣಗೊಳಿಸಿ ಜನರ ಉಪಯೋಗಕ್ಕೆ ಮುಕ್ತಗೊಳಿಸಲಾಗಿದೆ. ಇದರಿಂದ ನಗರ ಸೇರಿ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ ಸ್ಥಳಿಯವಾಗಿಯೇ ಸುಧಾರಿತ ಆರೋಗ್ಯ ಸೇವೆ ಲಭ್ಯವಾಗಲಿದೆ ಎಂದರು.
ಈಗಾಗಲೇ ಸರ್ಕಾರಿ ಆಸ್ಪತ್ರೆಯನ್ನು 150 ಹಾಸಿಗೆಗೆ ಮೇಲ್ದರ್ಜೇಗೆ ಏರಿಸುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದೆ. ವಿವಿಧ ವಿಭಾಗಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಹೊರರೋಗಿಗಳ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ 5 ಕೋಟಿ ರೂ. ಒದಗಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸಿದ್ದು ಪಾಟೀಲ್, ಸಹಾಯಕ ಆಯುಕ್ತ ಪ್ರಭುರೆಡ್ಡಿ, ಕಾರ್ಮಿಕರ ಸಂಘದ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್, ಕಾರ್ಯಾಧ್ಯಕ್ಷ ವೀರೇಂದ್ರ ರುದ್ನೂರ, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಶಿವಶರಣರೆಡ್ಡಿ ಪಾಟೀಲ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜೀವಕುಮಾರ ಪಾಟೀಲ್, ಅಲ್ಟ್ರಾಟೆಕ್ ಕಂಪನಿ ಘಟಕದ ಮುಖ್ಯಸ್ಥ ಶ್ರೀರಾಮ ಪಿ.ಎಸ್., ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷ ಸತೀಶಕುಮಾರ, ಆರೋಗ್ಯ ಇಲಾಖೆ ಇಂಜಿನಿಯರ್ ಸೋಮಶೇಖರ ಪೂಜಾರಿ, ಗಣೇಶ ಕಡಬಗಾಂವ್ ಇತರರಿದ್ದರು.
ಕಾರ್ಖಾನೆ ಮಾನವ ಸಂಪನ್ಮೂಲ ವಿಭಾಗದ ನಾಗಕುಮಾರ ಎಳ್ಳಿ ಸ್ವಾಗತಿಸಿ, ನಿರೂಪಣೆ ಮಾಡಿದರು. ಸತೀಶಕುಮಾರ ಪ್ರಾಸ್ತಾವಿಕ ಮಾತನಾಡಿದರು. ಆಡಳಿತ ವೈಧ್ಯಾಧಿಕಾರಿ ಡಾ.ನಾಗರಾಜ ಮನ್ನೆ ವಂದಿಸಿದರು.
ಮೆಡಿಕಲ್ ಕಾಲೇಜುಗಳಿಗೆ ತಲಾ 3 ಆಸ್ಪತ್ರೆಗಳನ್ನು ದತ್ತು ನೀಡುವ ನಿಟ್ಟಿನಲ್ಲಿ ಸರ್ಕಾರ ಆದೇಶಿಸಿದೆ. ಅದರಂತೆ ಕಲಬುರಗಿಯ ಜಿಮ್ಸ್ ಮೆಡಿಕಲ್ ಕಾಲೇಜಿಗೆ ಸೇಡಂ, ಸುಲೇಪೇಟ, ಮಳಖೇಡ ಆಸ್ಪತ್ರೆಗಳನ್ನು ದತ್ತು ಪಡೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ. ಇದರಿಂದಾಗಿ ಆಸ್ಪತ್ರೆ ಸುಧಾರಣೆಯಾಗಲಿದ್ದು, ಸೌಲಭ್ಯ ಹೆಚ್ಚಳಗೊಳ್ಳಲಿವೆ. ಜನತೆಗೆ ಉತ್ತಮ ಆರೋಗ್ಯ ಸೇವೆ ದೊರಕಲಿದೆ. ಜಿಮ್ಸ್ನಲ್ಲಿನ ಸಿಟಿ ಸ್ಕಾ$್ಯನ್ ಯಂತ್ರವನ್ನು ಸೇಡಂ ತಾಲೂಕು ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದು, ಇದಕ್ಕಾಗಿ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿ 30 ಲಕ್ಷ ರೂ.ಗಳನ್ನು ಸಿಎಸ್ಆರ್ ನಿಧಿಯಲ್ಲಿ ನೀಡಿದೆ.> ಡಾ.ಶರಣಪ್ರಕಾಶ ಪಾಟೀಲ್, ವೈದ್ಯಕಿಯ ಶಿಕ್ಷಣ ಸಚಿವ