- ಪೊಲೀಸರಿಗೆ ವೀರಶೈವ ಲಿಂಗಾಯತರಿಂದ ಮನವಿ
- ಕೇಸ್ ವಾಪಸ್ಗೆ ಆಗ್ರಹ
ಕಲಬುರಗಿ: ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದ, ನಿಂದಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವೀರಶೈವ ಲಿಂಗಾಯತ ಸಮಾಜದಿಂದ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ನಗರದ ಪೊಲೀಸ್ ಆಯುಕ್ತರ ಕಚೇರಿ ಎದುರು ಸೋಮವಾರ ನೂರಾರು ಜನರು ಪ್ರತಿಭಟನೆ ನಡೆಸಿ, ಜಿಲ್ಲೆಯಲ್ಲಿ ಪ್ರತಿಷ್ಠಿತ ರೇವೂರ ಕುಟುಂಬಕ್ಕೆ ನಿರಂತರವಾಗಿ ನಿಂದಿಸಲಾಗುತ್ತಿದೆ. ನಾಲ್ಕು ದಶಕದಿಂದ ರೇವೂರ ಕುಟುಂಬ ಸಾಮಾಜಿಕ, ಔದ್ಯೋಗಿಕ, ಧಾರ್ಮಿಕ , ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದೆ. ಆದ್ದರಿಂದಲೇ ರೇವೂರ ಕುಟುಂಬ ಮೂರು ದಶಕದಿಂದ ರಾಜಕೀಯದಲ್ಲಿ ಜನ ಬೆಂಬಲಿಸುತ್ತಿದ್ದಾರೆ. ಅವರ ನಿಂದನೆಯನ್ನು ಪ್ರತಿಭಟನಾಕಾರರು ಖಂಡಿಸಿದರು.
ದತ್ತಾತ್ರೇಯ ಪಾಟೀಲ್ ತಪ್ಪು ಮಾತಾಡಿದರೆ ಕಾನೂನು ಹೋರಾಟ ಮಾಡಲಿ. ಅದನ್ನು ಬಿಟ್ಟು, ನಿಂದನೆ, ಬೆದರಿಕೆಯನ್ನು ವೀರಶೈವ ಲಿಂಗಾಯತ ಸಮಾಜ ಸಹಿಸುವುದಿಲ್ಲ. ಅದಕ್ಕೆ ತಕ್ಕ ಉತ್ತರವನ್ನು ನೀಡಲಾಗುವುದು. ಕೂಡಲೇ ಅಪ್ಪುಗೌಡರ ವಿರುದ್ಧದ ಕೇಸ್ ವಾಪಸ್ ಪಡೆಯಬೇಕು, ನಿಂದಿಸಿ, ಬೆದರಿಕೆ ಹಾಕಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ವಾಗ್ವಾದ, ಅವಮಾನದ ಆರೋಪ: ಪೊಲೀಸ್ ಆಯುಕ್ತರು ಕಚೇರಿ ಎದುರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಬೇಕು ಎಂದು ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರ ಎದುರಿನಿಂದಲೇ ಕಚೇರಿ ಪ್ರವೇಶಿಸಿದ್ದು, ಸೌಜನ್ಯಕ್ಕೂ ಸಮಸ್ಯೆ ಆಲಿಸದೇ ಹೋಗಿದ್ದಕ್ಕೆ ಕಿಡಿ ಕಾರಿದರು. ಸ್ಥಳಕ್ಕೆ ಆಗಮಿಸುವವರೆಗೆ ಎದ್ದೇಳುವುದಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು. ನಂತರ ಡಿಸಿಪಿ ಶಾಲೂ ಆಗಮಿಸಿ, ಮನವಿ ಸ್ವೀಕರಿಸಿದರು. ನಗರ ಪೊಲೀಸ್ ಆಯುಕ್ತರು ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರಮುಖರಾದ ಮಲ್ಲಿಕಾರ್ಜುನ ಖೇಮಜಿ, ಸುಭಾಷ ಬಿಜಾಪುರೆ, ಕಲ್ಯಾಣರಾವ ಪಾಟೀಲ್ ಮಳಖೇಡ, ಅರುಣಕುಮಾರ ಪಾಟೀಲ್, ನಾಗಲಿಂಗಯ್ಯ ಹಿರೇಮಠ, ಅಪ್ಪು ಕಣಕಿ, ಮಹಾದೇವ ಬೆಳಮಗಿ, ಅಪ್ಪಾಸಾಬ್ ಪಾಟೀಲ್, ಬಸವರಾಜ ಬಿರಾಳ, ಶರಣಗೌಡ ಬಿರಾದಾರ, ವಿಶ್ವನಾಥ ಸಾಲಿಮಠ, ಶಿವಲಿಂಗೇಶ್ವರ ಪಾಟೀಲ್, ಕೊಮ್ಮಣ್ಣಗೌಡ ಪಾಟೀಲ್, ವೀರಣ್ಣ ಹೊನ್ನಳ್ಳಿ, ರಾಜು ದೇವದುರ್ಗ, ಗೌರಿ ಚಿಚಕೋಟಿ, ಮಾಲಾ ಕಣ್ಣಿ, ಪರಮೇಶ್ವರ ಯಳಮೇಲಿ, ಸಿದ್ರಾಮಯ್ಯ ಪುರಾಣಿಕಮಠ, ವೀರಣ್ಣ ಔರಾದಿ, ಪ್ರಕಾಶ ಪಾಟೀಲ್ ಹೀರಾಪುರ, ರಾಜೇಂದ್ರ ಕರೆಕಲ್, ಗಿರೀಶ ಕೋಟನೂರ, ಶಂಭು ಬಳಬಟ್ಟಿ ಇತರರಿದ್ದರು.