- ಕಮಲಾವತಿ ನದಿ ದಾಟಿಸಿ ಶವಸಂಸ್ಕಾರ; ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆ
ಸೇಡಂ: ಸಚಿವ ಶರಣಪ್ರಕಾಶ್ ಪಾಟೀಲ್ ಅವರ ಸ್ವಕ್ಷೇತ್ರವಾದ ಸೇಡಂ ಪಟ್ಟಣದ ಹೊರವಲಯದಲ್ಲಿ ಹರಿಯುವ ಕಮಲಾವತಿ ನದಿ ಮಳೆಗಾಲದಲ್ಲಿ ಮೃತರ ಅಂತ್ಯಸಂಸ್ಕಾರಕ್ಕೂ ತೀವ್ರ ಸಂಕಷ್ಟ ತಂದೊಡ್ಡುತ್ತಿದೆ. ನದಿ ದಾಟಲು ಸೇತುವೆ ಇಲ್ಲದ ಕಾರಣ, ಮೃತದೇಹವನ್ನು ರುದ್ರಭೂಮಿಗೆ ಸಾಗಿಸಲು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇಡಂನ ಮಾಜಿ ಪುರಸಭೆ ಸದಸ್ಯ ರಾಜು ಕಾಳಗಿಕರ್ ಅವರು ನಿಧನರಾದ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಕಮಲಾವತಿ ನದಿ ದಾಟಿಸಿ ರುದ್ರಭೂಮಿಗೆ ಕೊಂಡೊಯ್ಯಬೇಕಾಯಿತು. ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಟ್ರ್ಯಾಕ್ಟರ್ ಮೂಲಕ ಮೃತದೇಹವನ್ನು ಸಾಗಿಸಲು ಪ್ರಯತ್ನಿಸಲಾಯಿತು.
ನದಿ ದಾಟುವ ಸಂದರ್ಭದಲ್ಲಿ ಶವಸಂಸ್ಕಾರಕ್ಕೆ ತೆರಳಿದ್ದವರು ಮಾನವ ಸರಪಳಿ ನಿರ್ಮಿಸಿ, ಪರಸ್ಪರ ನೆರವಿನಿಂದ ಮೃತದೇಹವನ್ನು ನದಿ ದಾಟಿಸಿ ರುದ್ರಭೂಮಿಗೆ ಕೊಂಡೊಯ್ದರು. ಬಳಿಕ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಕಮಲಾವತಿ ನದಿಗೆ ಸೇತುವೆ ನಿರ್ಮಿಸುವಂತೆ ಸ್ಥಳೀಯರು ಹಲವು ದಿನಗಳಿಂದ ಆಗ್ರಹಿಸುತ್ತಿದ್ದರೂ ಇದುವರೆಗೆ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ ಎಂಬ ಆರೋಪ ಕೇಳಿಬಂದಿದೆ. ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದರಿಂದ ಮೃತದೇಹಗಳನ್ನು ರುದ್ರಭೂಮಿಗೆ ಸಾಗಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಜನರ ಓಡಾಟಕ್ಕೆ ಮಾತ್ರವಲ್ಲ, ಮೃತರ ಅಂತ್ಯಸಂಸ್ಕಾರಕ್ಕೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ಆಡಳಿತ ವ್ಯವಸ್ಥೆಯ ವಿರುದ್ಧ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕಮಲಾವತಿ ನದಿಗೆ ಸೇತುವೆ ನಿರ್ಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.