cow slaughter ban bajrangdal strike 
ಕಲಬುರಗಿ

ಗೋ ಹತ್ಯೆ ನಿಷೇಧ ಕಟ್ಟು ನಿಟ್ಟಾಗಿ ಜಾರಿಗೆ ತನ್ನಿ: ಬಜರಂಗದಳ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ವಿಎಚ್​ಪಿ, ಬಜರಂಗದಳದಿಂದ ನಗರ ಪೊಲೀಸ್​ ಆಯುಕ್ತರಿಗೆ ಮನವಿ
ಕಲಬುರಗಿ: ನಗರದಲ್ಲಿ ಗೋವುಗಳ ಹತ್ಯೆ ನಿರಂತರವಾಗಿ ನಡೆಯುತ್ತಿದ್ದು, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು, ಗೋ ಅಕ್ರಮ ಸಾಗಣೆ ತಡೆಯಬೇಕು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ನಗರದಲ್ಲಿ ವಿಶ್ವ ಹಿಂದು ಪರಿಷತ್​, ಬಜರಂಗದಳದಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು
ನಗರದ ಪೊಲೀಸ್​ ಆಯುಕ್ತ ಕಚೇರಿ ಎದುರು ನೂರಾರು ಕಾರ್ಯಕರ್ತರು, ಮುಖಂಡರು ಪ್ರತಿಭಟನೆ ನಡೆಸಿ, ಗೋ ವಧೆ ಮಾಡುವ ಸ್ಥಳಗಳನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು ಎಂಬ ನಿಯಮವಿದ್ದು, ಅದನ್ನು ನಗರದಲ್ಲಿ ಅನ್ವಯಿಸಿ, ಕಟ್ಟು ನಿಟ್ಟಾಗಿ ಜಾರಿ ಮಾಡಬೇಕು ಎಂದು ಮನವಿ ಮಾಡಿದರು.
ಕಾಯ್ದೆಯಲ್ಲಿ ಗೋವುಗಳ ಹಿಂಸಾತ್ಮಕ ಸಾಗಣೆ ತಡೆಗೆ ಅವಕಾಶವಿದ್ದು, ಮೇ 28ರವರೆಗೆ ಸಂಪೂರ್ಣ ಬಂದೋಬಸ್ತ್​ ಮಾಡಬೇಕು, ಗಡಿ ಭಾಗದಲ್ಲಿ ಹೆಚ್ಚುವರಿ ಚೆಕ್​ಪೋಸ್ಟ್​ ಹಾಕಿ ತಡೆಯಬೇಕು, ಮುಚ್ಚಿರುವ ಟ್ಯಾಂಕ್​ಗಳನ್ನು ಸರಿಯಾಗಿ ತಪಾಸಣೆ ಮಾಡಬೇಕು, ಮೀಸಲು ಪೊಲೀಸ್​ ಪಡೆ ತರೆಸಿ, ಶ್ವಾನದಳದ ಮೂಲಕ ಪರಿಶೀಲಿಸಿ, ಪತ್ತೆ ಹಚ್ಚಬೇಕು, ಗೋ ಸಾಗಣೆ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನ ಬಳಸಬೇಕು, ಅಕ್ರಮ ಗೋ ವ್ಯವಹಾರದ ಮಾಫಿಯಾ ಜಾಲ ಭೇದಿಸಬೇಕು, ಅಕ್ರಮ ಗೋ ಸಾಗಣೆ, ವಧೆ, ಮಾಂಸ ಮಾರಾಟಗಾರರನ್ನು ಗುರುತಿಸಿ, ಕೋಕಾ ಕಾಯ್ದೆಯಂತೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ಗೋ ಸಾಗಣೆಯ ವಾಹನದ ಮಾಲಿಕರನ್ನು ಬಂಧಿಸಬೇಕು, ಪದೇ ಪದೆ ಗೋ ಅಪರಾಧ ಮಾಡುತ್ತಿರುವವರಿಗೆ ಜಾಮೀನು ಸಿಗದಂತೆ ಕೋರ್ಟ್​ಗೆ ಮಾಹಿತಿ ನೀಡಬೇಕು, ಮೇ 28ರವರೆಗೆ ಗೋ ಸಾಗಿಸುತ್ತಿದ್ದ ವಾಹನಗಳನ್ನು ಠಾಣೆಯಲ್ಲಿ ಇರಿಸಿಕೊಳ್ಳಬೇಕು, ಬಿಡಾಡಿ ಗೋವುಗಳನ್ನು ಕದಿಯುವ ಸಾಧ್ಯತೆ ಇದ್ದು, ನಿಗಾ ಇಡಬೇಕು, ಎಲ್ಲ ಜಿಲ್ಲೆಗಳಲ್ಲಿ ಸರ್ಕಾರಿ ಗೋ ಶಾಲೆಗಳನ್ನು ತೆರೆಯಬೇಕು, ಗೋರಕ್ಷಣೆಗೆ ಪೊಲೀಸರು ಸಾರ್ವಜನಿಕರ ಸಹಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಬೆಂಗಳೂರಿನಲ್ಲಿ ರಚಿಸಿದ ಹಾಗೆ ಕಲಬುರಗಿ ನಗರ, ಜಿಲ್ಲೆಯಲ್ಲೂ ಬಕ್ರೀದ್​ ವೇಳೆ ಕುರ್ಬಾನಿ ಆಗದಂತೆ ವಿವಿಧ ಇಲಾಖೆಗಳ ಸಮನ್ವಯದಲ್ಲಿ ತಂಡ ರಚಿಸಬೇಕು, ಸಾರ್ವಜನಿಕರಿಂದ ಮಾಹಿತಿ ಸಿಕ್ಕ ಕೂಡಲೇ ಗೋವುಗಳನ್ನು ರಸಬೇಕು, ದೂರು ದಾಖಲಾಗದಿದ್ದರೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಜರಂಗದಳದ ಪ್ರಾಂತ ಸಂಯೋಜಕ ಬಸವರಾಜ ಸೂಗೂರ, ಸಹ ಸಂಯೋಜಕ ಶಿವಕುಮಾರ ಸುಕಲೂರ, ಮಹಾನಗರ ಸಂಯೋಜಕ ರಾವೇಂದ್ರ ಗುತ್ತೇದಾರ್​, ಸಹ ಸಂಯೋಜಕ ಶಶಿಕುಮಾರ ಶೆಟ್ಟಿ, ಗೋರಾ ಪ್ರಮುಖ ಕೌಸ್ತುಬ ಕುಲ್ಕರ್ಣಿ, ಪ್ರಮುಖರಾದ ಎಂ.ಎಸ್​.ಪಾಟೀಲ್​ ನರಿಬೋಳ, ದಿವ್ಯಾ ಹಾಗರಗಿ, ಸಿದ್ದರಾಮಯ್ಯ ಹಿರೇಮಠ, ಪ್ರಸಾದ ಜೋಶಿ ಇತರರಿದ್ದರು.
ವಧೆಗೆ ತಂದ ಗೋವು ರಕ್ಷಿಸಿ
ಕಲಬುರಗಿ ನಗರದಲ್ಲಿ ಈಗಾಗಲೇ ಮೇ 28ರಂದು ವಧೆ ಮಾಡಲು ವಿವಿಧ ವಧಾ ಸ್ಥಳಗಳಲ್ಲಿ ಗೋವುಗಳನ್ನು ತಂದು ಕಟ್ಟಿಹಾಕಿದ್ದು, ಚಿತ್ರ ಸಹಿತ ಮಾಹಿತಿ ಪೊಲೀಸರಿಗೆ ನೀಡಲಾಗುತ್ತಿದೆ. ತಕ್ಷಣ ಆ ಸ್ಥಳಗಳಿಗೆ ಭೇಟಿ ನೀಡಿ ಗೋವುಗಳನ್ನು ರಸಬೇಕು ಎಂದು ಬಜರಂಗದಳ ಮುಖಂಡರು ಕೋರಿದರು.