- ಶ್ರೀರಾಮ ಸೇನೆ ಪ್ರತಿಭಟನೆ
- ಬಕ್ರೀದ್ ಹಿನ್ನೆಲೆಯಲ್ಲಿ ನಿಗಾ ಹೆಚ್ಚಳಕ್ಕೆ ಮನವಿ
ಕಲಬುರಗಿ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಿ ಖುರ್ಬಾನಿ ಹೆಸರಿನಲ್ಲಿ ಹತ್ಯೆ ಮಾಡುವುದನ್ನು ತಡೆಯಬೇಕು, ಸಾಗಣೆ, ಹತ್ಯೆ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶ್ರೀರಾಮ ಸೇನೆ ಜಿಲ್ಲಾ ಟಕದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಕಲಬುರಗಿಯಲ್ಲಿ ಅಕ್ರಮ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಲಕ್ಷಿ$್ಮಕಾಂತ ಸ್ವಾದಿ ಮಾತನಾಡಿ, ಹಿಂದುಗಳು ಪೂಜಿಸುವ ಗೋವಿನ ಹತ್ಯೆ ನಡೆಯಬಾರದು. ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯಗಳನ್ನು ಅಧಿಕಾರಿಗಳು ತಡೆಯಲು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಆಳಂದ ರಿಂಗ್ ರಸ್ತೆ, ಹುಮನಾಬಾದ್ ರಿಂಗ್ ರಸ್ತೆ, ಸೇಡಂ ರಿಂಗ್ ರಸ್ತೆ, ಶಹಾಬಾದ್ ರಿಂಗ್ ರಸ್ತೆ ಹಾಗೂ ಜೇವರ್ಗಿ ರಿಂಗ್ ರಸ್ತೆಗಳಲ್ಲಿ 24 ಗಂಟೆ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಿ ಅಕ್ರಮ ಗೋ ಸಾಗಾಟ ತಡೆಯುವಂತೆ ಮನವಿ ಮಾಡಿದರು.
ಬಕ್ರೀದ್ ವೇಳೆ ಇತರೆ ರಾಜ್ಯಗಳಿಂದ ಅಕ್ರಮವಾಗಿ ತರಲಾಗುವ ಗೋವುಗಳು ಹಾಗೂ ಜಾನುವಾರುಗಳನ್ನು ರಕ್ಷಿಸಬೇಕು. ಅಕ್ರಮ ಸಾಗಣೆ ನಡೆಸುವ ವಾಹನಗಳು ಮತ್ತು ಮಾಲೀಕರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ರಾತ್ರಿ ಗೋ ರಕ್ಷಣೆ ಕಾರ್ಯದಲ್ಲಿ ತೊಡಗುವ ಕಾರ್ಯಕರ್ತರಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ವೀರೇಶ ಗಣಮುಖಿ, ವೀರೇಶ್ ಕೊರಳ್ಳಿ, ರಾಮು ಸೇವಕ ಶಿವು, ಚನ್ನವಿರ ಸಿಂಗಿ, ಉದಯ ಸುಲ್ತಾನಪುರ, ವಿರೇಶ್ ಬಿಂಗೆ, ಪ್ರಶಾಂತ ಶಿರೂರ್, ಶರಣು ಶಿರೂರ, ಸಾಯಿನಾಥ ಸಾಸಟ್ಟಿ, ಗಣೇಶ ರಾಠೋಡ ಇತರರಿದ್ದರು.