ಕಲಬುರಗಿ

ಯಳವಂತಗಿಯಲ್ಲಿ ಸಿದ್ಧಾರೂಢರ ಜಾತ್ರೋತ್ಸವ ಇಂದಿನಿಂದ

ಕಲಬುರಗಿ: ಯಳವಂತಗಿ(ಕೆ) ಗ್ರಾಮದ ಮೋಕ್ಷಾಶ್ರಮದಲ್ಲಿ ಶ್ರೀ ಸಿದ್ಧಾರೂಢ ಮಹಾಸ್ವಾಮಿಗಳ 45ನೇ ಜ್ಞಾನ ದಾಸೋಹ ಹಾಗೂ ಜಾತ್ರಾ ಮಹೋತ್ಸವ ಗುರುವಾರದಿಂದ ನ.23ರವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಗ್ರಾಮದ ವೀರಣ್ಣಗೌಡ ಹಿರೇಗೌಡ ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ 9ಕ್ಕೆ ಧ್ವಜಾರೋಹಣದ ಮೂಲಕ ಐದು ದಿನಗಳ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. 10ಗಂಟೆಗೆ ದೀಪೋತ್ಸವಕ್ಕೆ ಚಾಲನೆ, ಬಳಿಕ ಪ್ರವಚನ ಜರುಗಲಿದೆ. ಬೃಹತ್​ ಸಮಾರಂಭದಲ್ಲಿ ಬೀದರ್​ ಚಿದಂಬರ ಆಶ್ರಮದ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸುವರು. ಇನ್ನುಳಿದಂತೆ ಕಲಬುರಗಿ ಸಿದ್ಧಾರೂಡ ಮಠದ ಶ್ರೀ ಲಕ್ಷಿ$್ಮದೇವಿ ತಾಯಿ, ಮುಚಳಂಬಾದ ಶ್ರೀ ಪ್ರಣವಾನಂದ ಸ್ವಾಮೀಜಿ, ಯಳಸಂಗಿಯ ಶ್ರೀ ಪರಮಾನಂದ ಸ್ವಾಮೀಜಿ, ಬೀದರ್​ನ ಶ್ರೀ ಗಣೇಶಾನಂದ ಮಹಾರಾಜ, ಶ್ರೀ ಸ್ವಾಮಿ ಶಿವಪ್ರಕಾಶನಂದಗಿರಿ, ಶ್ರೀ ವಿನಾಯಕ ಸ್ವಾಮೀಜಿ, ಆಳೂರಿನ ಶ್ರೀ ಶಂಕರಾನಂದ ಸ್ವಾಮೀಜಿ, ಹತಗುಂದಾದ ಶ್ರೀ ಶಿವಲೀಲಾ ತಾಯಿ, ಕಲ್ಲಹಂಗರಗಾದ ಶ್ರೀ ಗೋಪಾಲ ಶಾಸಿ, ಕಲಬುರಗಿಯ ಶ್ರೀ ಶಂಕ್ರೆಮ್ಮ ತಾಯಿ, ಶ್ರೀ ನೀಲಾಂಬಿಕಾ ತಾಯಿ ಸೇರಿ ವಿವಿಧ ಮಠಾಧೀಶರು ಪಾಲ್ಗೊಳ್ಳುವರು.

ನಿತ್ಯ ಷಣ್ಮುಖ ಶಿವಶಂಕರ ಬಿರಾದಾರ ಅವರಿಂದ ಶ್ರೀ ಸಿದ್ಧಾರೂಢ ಸ್ವಾಮಿಗಳ ಚರಿತ್ರೆ ಪಾರಾಯಣ ಜರುಗಲಿದೆ. ಬೆಳಗ್ಗೆ 9ರಿಂದ 11 ಹಾಗೂ ಸಂಜೆ 8ರಿಂದ 11ಗಂಟೆವರೆಗೆ ವಿವಿಧ ವಿಷಯಗಳ ಕುರಿತು ಪ್ರವಚನ ಜರುಗಲಿದೆ. ಗುರುವಾರ ಬೆಳಗ್ಗೆ ಜ್ಞಾನವಂದೇಸಾಕು ಮುಕ್ತಿಗೆ, ರಾತ್ರಿ ಶೃತಿ ವಿರಹಿತವಾದ ಮತವನುಳಿವುದೆ ಚಂದಮಮ. ಶುಕ್ರವಾರ ಬೆಳಗ್ಗೆ ವಿರತಿಯಿಂದಿರ ಸಂಪದ ಸುಖವುಂಟೆ ?, ರಾತ್ರಿ ಪರರ ದುರ್ಗುಣಗಳನು ಮರೆವುತಾದರಿಪುದೆ ಚಂದಮಮ. ನ.21ಕ್ಕೆ ಬೆಳಗ್ಗೆ ಮುಕ್ತಿ ಕಾಂತೆಯರತಿ ಸುಮ್ಮನಾಗುವುದೆ ?, ರಾತ್ರಿ ದೊರಕಲೇನದರೂಳು ಪರಿಣತೆದಳೆವುದೆ ಚಂದಮಮ. ನ.22ಕ್ಕೆ ಬೆಳಗ್ಗೆ ಎಲ್ಲ ಎಲ್ಲವನರಿದು ಫಲವೇನು ?, ರಾತ್ರಿ ವರಪುಣ್ಯಲತೆಯನಾವರಿಪಂತೆ ಬೆಳೆವುದೆ ಚಂದಮಮ. ನ.23ಕ್ಕೆ ಬೆಳಗ್ಗೆ ಗುರುವಿಲ್ಲದೆಂತಪ್ಪ ಪುರುಷರಿಗು ಮುಕ್ತಿ ಸವನಿಸದು.. ವಿಷಯ ಕುರಿತು ವಿದ್ವಾಂಸರು ಪ್ರವಚನ ನೀಡಲಿದ್ದಾರೆ.

ನ.21ರಿಂದ 23ರವರೆಗೆ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ನ.23ಕ್ಕೆ ಅಪಾರ ಭಕ್ತರಿಂದ ಶ್ರೀ ಸಿದ್ಧಾರೂಢ ಮಹಾರಾಜರ ಉತ್ಸವ ಮೂರ್ತಿಯ ತುಲಾಭಾರ ನೆರವೇರಲಿದೆ. ಯಳವಂತಗಿ (ಕೆ) ಗ್ರಾಮಕ್ಕೆ ಕಲಬುರಗಿಯ ಸುಪರ್​ ಮಾರ್ಕೆಟ್​ನಿಂದ ಬಸ್​ ಸೌಕರ್ಯವಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕು ಎಂದು ಕೋರಿದ್ದಾರೆ.