ಕಲಬುರಗಿ: ವಿಶ್ವ ವಾಸ್ತುಶಿಲ್ಪ ದಿನದ ಅಂಗವಾಗಿ ಶರಣಬಸವ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ವಿಭಾಗ ನಗರದ ಐತಿಹಾಸಿಕ ಶರಣಬಸವೇಶ್ವರ ದೇವಸ್ಥಾನ ಮತ್ತು ಮಹಾಮನೆಯ ನೆ ರೂಪಿಸುವ ಕಾರ್ಯಕ್ಕೆ ಚಾಲನೆ ನೀಡಿದೆ.
ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಹಿರಿಯ ಪ್ರಾಧ್ಯಾಪಕ ಪ್ರೊ.ಅಜಯಚಂದ್ರನ್ ಸಿ.ಕೆ. ಸೇರಿ ಹಿರಿಯ ವಾಸ್ತುಶಿಲ್ಪಿಗಳ ಮಾರ್ಗದರ್ಶನದಲ್ಲಿ ವಿಭಾಗದ ಬೋಧಕರು ಮತ್ತು ವಿದ್ಯಾರ್ಥಿಗಳು ದೇವಸ್ಥಾನ ಮತ್ತು ಅದರ ಸಮಗ್ರ ಸಂಕೀರ್ಣದ ನೆ ರೂಪಿಸಲು ಮುಂದಾಗಿದ್ದು, ಹಿರಿಯ ವಾಸ್ತುಶಿಲ್ಪಿ ಕಲ್ಯಾಣಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅಪ್ಪ ಮ್ಯಾಪಿಂಗ್ ಕಾರ್ಯಕ್ಕೆ ಚಾಲನೆ ನೀಡಿದರು. ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಪ್ರೊ.ಅಜಯ್ ಚಂದ್ರನ್, ವಾಸ್ತುಶಿಲ್ಪ ವಿಭಾಗದ ಡೀನ್ ಪ್ರೊ.ವೈಭವಕುಮಾರ ನವಣಿ, ವಿಭಾಗದ ಮುಖ್ಯಸ್ಥೆ ಪ್ರೊ.ಪಲ್ಲವಿ ಪಾಟೀಲ, ಪ್ರೊ.ಗೌತಮ, ಸಂಯೋಜಕ ಪ್ರೊ.ಸಿದ್ದಲಿಂಗ ಮಂಠಾಳೆ ಇತರರಿದ್ದರು.
ಇತಿಹಾಸದ ಮೇಲೆ ಬೆಳಕು: ಶರಣಬಸವೇಶ್ವರ ದೇವಸ್ಥಾನ ಮಾತ್ರವಲ್ಲ ಇಡೀ ಕಲ್ಯಾಣ ಕರ್ನಾಟಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿರುವ ದಾಸೋಹ ಮಹಾಮನೆಯನ್ನೂ ಈ ಮ್ಯಾಪಿಂಗ್ ಕಾರ್ಯದಲ್ಲಿ ಸೇರಿಸಲಾಗಿದೆ. 18ನೇ ಶತಮಾನದ ಸಂತ ಶರಣಬಸವೇಶ್ವರರು ಈ ಭಾಗದಲ್ಲಿ ಬಡವರು ಹಾಗೂ ಅಗತ್ಯವಿರುವವರಿಗೆ ಉಚಿತ ಅನ್ನ ದಾಸೋಹವನ್ನು ಜೀವನ ಪದ್ಧತಿಯಾಗಿ ರೂಪಿಸಿದ್ದರು. ಜೀವನದ ಕೊನೆಯವರೆಗೂ ಕಲಬುರಗಿ ಮಹಾಮನೆಯಲ್ಲೇ ಶರಣಬಸವೇಶ್ವರರು ವಾಸವಾಗಿದ್ದರು. ಸುಮಾರು 250 ವರ್ಷದ ಹಿಂದೆ ಸಂತರು ತಮ್ಮ ಅಂತಿಮ ದಿನಗಳಿಗೂ ಮುನ್ನ ಬೆಳಗಿಸಿದ ವಿಶಿಷ್ಟ ನಂದಾದೀಪ ಇಂದಿಗೂ ನಿರಂತರ ಬೆಳಗುತ್ತಿದೆ. ಇತಿಹಾಸದ ಮತ್ತೊಂದು ಮಹತ್ವದ ಘಟನೆಯಾಗಿ 1927ರ ಫೆ.26ರಂದು ಮಹಾತ್ಮ ಗಾಂಧೀಜಿ ಮಹಾಮನೆಗೆ ಭೇಟಿ ನೀಡಿ ಸಂಸ್ಥಾನದ 7ನೇ ಪೀಠಾಧಿಪತಿ ಲಿಂ.ಪೂಜ್ಯ ದೊಡ್ಡಪ್ಪ ಅಪ್ಪ ಅವರನ್ನು ಕಂಡು ಶರಣಬಸವೇಶ್ವರ ದೇವಸ್ಥಾನದ ಮೇಲೆ ರಜಾಕಾರರ ದಾಳಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.