ಜಯಂತಿ ಆಚರಣೆ 
ಕಲಬುರಗಿ

ಜಗತ್ತಿಗೆ ಕಾಯಕ ಮತ್ತು ದಾಸೋಹದ ಮಹತ್ವ ಸಾರಿದ ಶರಣರು - ಶಾಸಕ ಅಲ್ಲಮಪ್ರಭು ಪಾಟೀಲ

ಪ್ರಮುಖ ಮುಖ್ಯಾಂಶಗಳು

  • ಕಾಯಕ ಶರಣರ ಜಯಂತಿ ಆಚರಣೆ
ಕಲಬುರಗಿ: ಕಾಯಕ ಮತ್ತು ದಾಸೋಹದ ಪರಿಕಲ್ಪನೆಯ ಮೂಲಕ ಅಂದಿನ ಕಾಲದ ಅಸ್ಪೃಶ್ಯತೆ ಮತ್ತು ಮೂಢನಂಬಿಕೆಗಳ ವಿರುದ್ಧ ಹೋರಾಡಿದ್ದರು. ಜಗತ್ತಿಗೆ ಕಾಯಕ ಮತ್ತು ದಾಸೋಹದ ಮಹತ್ವ ಸಾರಿದ ಶರಣರು, 900 ವರ್ಷಗಳ ಹಿಂದೆಯೇ ಶರಣರು ವಚನ ಸಾಹಿತ್ಯದ ಮೂಲಕ ಮನುಷ್ಯನನ್ನು ಧರ್ಮದ ಹಾದಿಗೆ ತರುವ ಕೆಲಸ ಮಾಡಿದ್ದಾರೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ಮಂಗಳವಾರ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕಾಯಕ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದ ಪ್ರಮುಖ ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಮತ್ತು ಬಸವಣ್ಣನವರು ಕುರಿತು ಕಾಯಕವೇ ಕೈಲಾಸ ತತ್ವದ ಮಹತ್ವವಾಗಿದೆ ಎಂದರು.
ಸಮಾನತೆ ಮತ್ತು ಹಕ್ಕುಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣ. ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳು ಸಮಾಜದಲ್ಲಿ ಸ್ತ್ರೀ ಸಮಾನತೆ ಮತ್ತು ಅಸ್ಪೃಶ್ಯತೆ ನಿವಾರಣೆಗೆ ದಾರಿದೀಪವಾಗಿವೆ ಎಂದು ತಿಳಿಸಿದರು.
ಮಾದರ ದೂಳಯ್ಯ ಇವರು ಸುಮಾರು 300ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಸಮಾಜಕ್ಕೆ ಜ್ಞಾನದ ಕೊಡುಗೆ ನೀಡಿದ್ದಾರೆ, ಸಮಗಾರ ಹರಳಯ್ಯ ಇವರು 366 ವಚನಗಳನ್ನು ರಚಿಸುವ ಮೂಲಕ ಕಲ್ಯಾಣ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಡೋಹರ ಕಕ್ಕಯ್ಯ ಇವರ ಆರು ಪ್ರಮುಖ ವಚನಗಳು ಲಭ್ಯವಿದ್ದು, ಇವರೂ ಕೂಡ ಸಾಮಾಜಿಕ ಬದಲಾವಣೆಗೆ ಶ್ರಮಿಸಿದವರು.
ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಪ್ರಭುಶ್ರೀ ತಾಯಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, 12ನೇ ಶತಮಾನದ ಪ್ರಮುಖ ಶರಣರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿ ಅವರು ವಚನಗಳ ಮೂಲಕ ಕಾಯಕದಿಂದ ನೀಡಿದ ಹಾಗೂ ಕೊಡುಗೆಗಳನ್ನು ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಿಕಾ ಪರಮೇಶ್ವರ್ ಅವರು ಮಾತನಾಡಿ ನಾಡಿಗೆ ಶರಣ ನೀಡಿದ ಕೂಡುಗೆ ಬಗ್ಗೆ ಇಂದಿನ ಮಕ್ಕಳಿಗೆ ನಾವು ತಿಳಿಸಬೇಕು ಜಯಂತಿ ಸಮಯದಲ್ಲಿ ಸಮಾಜದ ಮುಖಂಡರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಅವರು ಹೇಳಿದರು.
ಉರಿಲಿಂಗಪೆದ್ದಿ ಮಠ ಉಪಾಧ್ಯಕ್ಷರು ಶಂಕರ ಕೋಡ್ಲಾ ಜಾತಿ ಭೇದ ಮಾರೆತು ನಾವೆಲ್ಲರೂ ಜಯಂತಿಗಳು ಬಂದಾಗ ಸಮನ್ವಯತೆಯಿಂದ ನಾವೆಲ್ಲರೂ ಸೇರಿಕೊಂಡು ಕೆಲಸ ಮಾಡಿದ್ದಾಗ ಜಯಂತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜರುತ್ತವೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಜಗದೀಶ್ವರಿ ಸಿ ನಾಸಿ ಸ್ವಾಗತಿಸಿದರು.
ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ್ ಜಾನಿ, ಜಿಲ್ಲಾಧಿಕಾರಿ ಕಚೇರಿಯ ಸಹಾಯಕರಾದ ಶಿವಪ್ರಭು ಹಿರೇಮಠ್, ಶರಣ ಡೋಹರ ಕಕ್ಕಯ್ಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಸಾಯಿಬಣ್ಣ ಹೋಳ್ಕರ್, ಶರಣ ಮಾದಾರ ಧೂಳಯ್ಯ ಸಮಾಜ ಅಧ್ಯಕ್ಷ ರಮೇಶ್ ಹೊಸಮನಿ, ಜಿಲ್ಲಾ ಶಿವಶರಣ ಹರಳಯ್ಯ ಸಮಾಜ ಅಧ್ಯಕ್ಷ ಕಾಶಿರಾಯ ನಂದೂರಕರ್, ಸಮಾಜದ ಮುಖಂಡರಾದ ರಾಜು ವಾಡೆೆಕರ್, ರಾಮಚಂದ್ರ ಕಾಂಬಳೆ, ಮಂಜುನಾಥ್ ನಾಲ್ವರಕರ್ ಸೇರಿದಂತೆ ಹಲವಾರು ಇದ್ದರು.