ಕಲಬುರಗಿ

ವೇತನ ಮಿತಿ 25,000 ರೂ.ಗೆ ಹೆಚ್ಚಳ

ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟವು ನೌಕರರ ಭವಿಷ್ಯ ನಿಧಿ ಸಂಸ್ಥೆಯ ಅಡಿಯಲ್ಲಿ ಕಡ್ಡಾಯ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿ ತಿಂಗಳಿಗೆ 15-25 ಸಾವಿರ ರೂ.ಗೆ ಹೆಚ್ಚಿಸಿ ಅನುಮೋದನೆ ನೀಡಿದೆ. ಇದರಿಂದ ದೇಶಾದ್ಯಂತ 51 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಕಡ್ಡಾಯ ವ್ಯಾಪ್ತಿಗೆ ತರುವ ನಿರೀಕ್ಷೆ ಹೊಂದಲಾಗಿದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಾದೇಶಿಕ ಪಿಎಫ್​ ಆಯುಕ್ತ ಎಂ.ಸುಬ್ರಹ್ಮಣ್ಯಂ ತಿಳಿಸಿದ್ದಾರೆ. ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ ತಿಂಗಳಿಗೆ 15,000ಕ್ಕಿಂತ ಹೆಚ್ಚಿನ ವೇತನದೊಂದಿಗೆ ಸೇವೆಗೆ ಸೇರುವ ಹೊಸ ಉದ್ಯೋಗಿಗೆ ಸ್ವಯಂಚಾಲಿತ ಇಪಿಎಫ್​ ಚೌಕಟ್ಟಿನ ವ್ಯಾಪ್ತಿಯಿಂದ ಹೊರಗುಳಿದಿದ್ದರು. ಇವರಿಗೆ ಭವಿಷ್ಯ ನಿಧಿ, ಪಿಂಚಣಿ ಮತ್ತು ವಿಮಾ ರಕ್ಷಣೆಯ ಲಾಭ ಸಿಗುತ್ತಿರಲಿಲ್ಲ. ಇದನ್ನು ಮನಗಂಡ ಕೇಂದ್ರ ಸರ್ಕಾರ ಕಾರ್ಮಿಕರ ವೇತನ ಮಿತಿ ಹೆಚ್ಚಿಸಿ ಅನುಮೋದನೆ ನೀಡಿದ್ದು, ಸೆ.17ರಿಂದ ವೇತನ ಪರಿಷ್ಕರಣೆ ಜಾರಿಗೆ ಬಂದಿದೆ ಎಂದರು. ಇದೀಗ ಕಾರ್ಮಿಕರ ಪಿಎಫ್​ ವೇಜಸ್​ ವೇತನ ಮಿತಿ 25,000ರೂ.ಗೆ ಹೆಚ್ಚಿಸಿರುವುದರಿಂದ 15&25 ಸಾವಿರ ರೂ.ವರೆಗಿನ ವೇತನ ಶ್ರೇಣಿಯಲ್ಲಿರುವ ಉದ್ಯೋಗಿಗಳು ಶಾಸನಬದ್ಧ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಒಳಪಡಲಿದ್ದಾರೆ. ಇವರಿಗೆ ನಿಬಂಧನೆಗಳ ಪ್ರಕಾರ ಭವಿಷ್ಯ ನಿಧಿ ಉಳಿತಾಯ, ನೌಕರರ ಪಿಂಚಣಿ ಯೋಜನೆ ಅಡಿ ಪಿಂಚಣಿ ಮತ್ತು ನೌಕರರ ಠೇವಣಿ ಆಧಾರಿತ ವಿಮಾ ಯೋಜನೆ ಅಡಿ ವಿಮಾ ರಕ್ಷಣೆ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.