ಕಲಬುರಗಿ: ದೇಶದ ಪ್ರತಿ ಗ್ರಾಮ ಅಭಿವೃದ್ಧಿಯ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ "ವಿಜಿ ರಾಮ್ ಜಿ' ಯೋಜನೆ ಜಾರಿಗೆ ತಂದಿದ್ದು, ಗ್ರಾಮೀಣಾಭಿವೃದ್ಧಿಗೆ ಹೊಸ ದಿಕ್ಸೂಚಿಯಾಗಿದೆ ಎಂದು ಶಾಸಕ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿದರು.
ಆರು ದಶಕದಿಂದ ಹಲವು ಯೋಜನೆ ಬಂದರೂ ಹಳ್ಳಿಗಳಲ್ಲಿ ನಿರೀಕ್ಷಿತ ಪ್ರಗತಿ ಕಂಡು ಬಂದಿರಲಿಲ್ಲ. ವಿ.ಜಿ.ರಾಮ್ ಜಿ ಯೋಜನೆ ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ. ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಏಳು ದಿನದೊಳಗೆ ನೇರ ನಗದು ವರ್ಗಾವಣೆ ಮೂಲಕ ವೇತನ ಪಾವತಿಸಲಾಗಿದೆ. 3 ತಿಂಗಳಿಗೊಮ್ಮೆ ಆಡಿಟ್ ಆಗಲಿದ್ದು, ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
50 ವರ್ಷದ ಹಿಂದೆ ಗ್ರಾಮೀಣ ಜನರ ಉದ್ಯೋಗ ಕ್ಕೆ ಗ್ರಾಮೀಣ ಉದ್ಯೋಗ, ರೋಜಗಾರ್ ಆವಾಸ್, ಕೂಲಿಗಾಗಿ ಕಾಳು ಯೋಜನೆ, ನರೇಗಾ ಸೇರಿ ಹಲವು ಹೆಸರಿನಲ್ಲಿ ಜಾರಿಗೆ ತರಲಾಗಿತ್ತು. ಎಲ್ಲವೂ ಗ್ರಾಮೀಣ ಭಾಗದ ಅಭಿವೃದ್ಧಿಗೆ ಪೂರಕವಾಗಿಲ್ಲವೆಂದು, ಮೂಲ ಸೌಕರ್ಯ, ಕೆರೆ ಕಟ್ಟೆ, ಆಸ್ಪತ್ರೆ, ಶಿಕ್ಷಣಕ್ಕಾಗಿ ವಿಬಿ ಜಿ ರಾಮ್ ಜಿ ಯೋಜನೆ ಜಾರಿಗೆ ತರಲಾಗಿದೆ ಎಂದರು.
ಕೇಂದ್ರ ಬಜೆಟ್ನಲ್ಲಿ ಈ ಯೋಜನೆಗೆ 95 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಒಟ್ಟು ಗ್ರಾಮೀಣಾಭಿವೃದ್ಧಿಗೆ 86 ಸಾವಿರ ಕೋಟಿ ರೂ., ಕೃಷಿ ಕ್ಷೇತ್ರಕ್ಕೆ ಒತ್ತು ನೀಡಲಾಗಿದೆ. ಸೆಮಿಕಂಡಕ್ಟರ್ ಚಿಪ್ ತಯಾರಿಕೆಯಲ್ಲಿ ಭಾರತ ಆತ್ಮನಿರ್ಭರವಾಗಲಿದೆ. ಅಮೆರಿಕ ಮತ್ತು ಚೀನಾದಂತಹ ದೇಶಗಳಿಗೆ ಭಾರತ ಪೈಪೋಟಿ ನೀಡುವ ಶಕ್ತಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಪ್ರತಿ ಜಿಲ್ಲೆಗೆ ಮಹಿಳಾ ಹಾಸ್ಟೆಲ್, ಔಷಧ ದರ ಕಡಿತಗೊಳಿಸಲಾಗಿದೆ. ಕಲಬುರಗಿಯಲ್ಲಿ ಜವಳಿ ಪಾರ್ಕ್ ಯೋಜನೆಗೆ ರಾಜ್ಯ ಸರ್ಕಾರ ವೇಗ ನೀಡುತ್ತಿಲ್ಲ. ಇದು ಆರಂಭವಾದರೆ ಉದ್ಯೋಗ ಸೃಷ್ಟಿಯಲ್ಲಿ ದೊಡ್ಡ ಬದಲಾವಣೆ ಬರಲಿದೆ. ರಾಜ್ಯ ಸರ್ಕಾರ ಜನರ ಹಿತ ಕಾಪಾಡಲಿ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಬಸವರಾಜ ಮತ್ತಿಮಡು, ಗ್ರಾಮಾಂತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಜಿಲ್ಲಾ ಕಾರ್ಯದರ್ಶಿಗಳಾದ ಲಿಂಗರಾಜ ಬಿರಾದಾರ, ಸಂತೋಷ ಹಾದಿಮನಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ಮಾಲಿಪಾಟೀಲ್, ಜಿಲ್ಲಾ ವಕ್ತಾರ ಚಂದ್ರಶೇಖರ ಪರಸರೆಡ್ಡಿ, ಮುಖಂಡರಾದ ಶೋಭಾ ಬಾಣಿ, ಶಿವರಾಜ ಪಾಟೀಲ್ ರದ್ದೇವಾಡಗಿ, ಆನಂದ ಪಾಟೀಲ್, ನಾಗರಾಜ್ ಮಹಾಗಾಂವಕರ್, ಬಾಬುರಾಯ ಹಾಗರಗುಂಡಗಿ ಇತರರಿದ್ದರು.