roof collapse 
ಕಲಬುರಗಿ

ಚಾವಣಿ ಕುಸಿತ : ಟ್ರಾಮಾ‌ ಸೆಂಟರ್ ಗೆ ಡಿಸಿ, ಜಿಲ್ಲಾ ಪಂಚಾಯತ್ ಸಿ.ಇ.ಓ ಭೇಟಿ

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿನಿಯರ ಆರೋಗ್ಯ ವಿಚಾರಣೆ
ಕಲಬುರಗಿ: ಶುಕ್ರವಾರ ಕಲಬುರಗಿ ನಗರದ ಹಳೇ ಎಸ್.ಪಿ. ಕಚೇರಿ ಎದುರುಗಡೆ ಇರುವ ಸರ್ಕಾರಿ‌ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ತರಗತಿ ಕೊಠಡಿಯಲ್ಲಿನ ಮೇಲ್ಚಾವಣಿಯ ಪದರು (ಪ್ಲಾಸ್ಟರ್) ಉದುರಿಬಿದ್ದು ಗಾಯಗೊಂಡ‌ ಮೂವರು ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ಇಲ್ಲಿನ ಟ್ರಾಮಾ‌ ಸೆಂಟರ್ ಗೆ ದಾಖಲಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್‌ ಶರೀಫ್ ಮತ್ತು ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನೂರ್ ಅವರು ಆಸ್ಪತ್ರೆಗೆ ಭೇಟಿ‌ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಯ ವೈದ್ಯ ಡಾ.‌ರೇವಣಸಿದ್ದಪ್ಪ ಭೋಸಗಿ ಅವರಿಂದ ವಿದ್ಯಾರ್ಥಿಗಳ ಆರೋಗ್ಯ ಕುರಿತು ಡಿ.ಸಿಮ, ಸಿ.ಇ.ಓ ಅವರು ಮಾಹಿತಿ ಪಡೆದುಕೊಂಡರು. ವಿದ್ಯಾರ್ಥಿಗಳಿಗೆ ಈಗಾಗಲೆ ಸಿ.ಟಿ.ಸ್ಕ್ಯಾನ್, ಇ.ಎಂ.ಆರ್.ಐ ಮಾಡಿ‌ ಚಿಕಿತ್ಸೆ ಮುಂದುವರೆಸಿದ್ದು, ಅರೋಗ್ಯ ಸ್ಥಿರವಾಗಿದೆ ಎಂದು‌ ವೈದ್ಯರು ತಿಳಿಸಿದರು. ಡಿ.ಸಿ.‌ಇಕ್ರಮ್‌ ಶರೀಫ್ ಮಾತನಾಡಿ ವೈದ್ಯಕೀಯ ಶಿಷ್ಠಚಾರಾದಂತೆ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಅವಶ್ಯಕೆ ಇದ್ದರೆ ತಜ್ಞ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರಿಗೆ ನಿರ್ದೇಶನ ನೀಡಿದರು.
ವಿದ್ಯಾರ್ಥಿಗಳ ಅರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು, ಮೂವರು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿನಿಯ ತಲೆ ಮೇಲೆ, ಇನ್ನಿಬ್ಬರಿಗೆ ಭುಜ, ಬೆನ್ನಿನ ಮೇಲೆ ಪದರು ಉದುರಿ ಬಿದಿದ್ದರಿಂದ ಗಾಯವಾಗಿದ್ದು, ಈಗಾಗಲೆ‌ ವೈದ್ಯರು ಸೂಕ್ತ‌ ಚಿಕಿತ್ಸೆ ನೀಡುತ್ತಿದ್ದಾರೆ. ಯಾವುದೇ ಭಯಪಡುವಂತಿದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ 24 ಗಂಟೆ ಕಾಲ ಆಸ್ಪತ್ರೆಯಲ್ಲಿಯೆ ವಿದ್ಯಾರ್ಥಿಗಳನ್ನು ಇರಿಸಿಕೊಂಡು ಸೂಕ್ತ‌ ಚಿಕಿತ್ಸೆ ಮತ್ತು ನಿಗಾ ವಹಿಸಲಾಗುತ್ತಿದೆ. ಪಾಲಕರಿಗೂ ವಿಷಯ ತಿಳಿಸಿದ್ದು, ಯಾವುದೇ ರೀತಿಯಲ್ಲಿ ಗಾಬರಿ ಪಡಬೇಕಿಲ್ಲ ಎಂದು‌ ಅವರಿಗೆ ಅಭಯ ನೀಡಲಾಗಿದೆ ಎಂದರು. ಡಿ.ಡಿ.ಪಿ.ಯು ಸುರೇಶ ಅಕ್ಕಣ್ಣ, ಡಿ.ಎಚ್.ಓ ಡಾ.ಶರಣಬಸಪ್ಪ ಕ್ಯಾತನಾಳ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.
ಶುಕ್ರವಾರ ಎಂದಿನಂತೆಯೆ ಬೆಳಿಗ್ಗೆ 10.30 ಗಂಟೆಗೆ ಕಾಲೇಜಿನಲ್ಲಿ ತರಗತಿ ನಡೆಯುವ ಸಂದರ್ಭದಲ್ಲಿ ಮೇಲ್ಚಾವಣಿಯ ಪದರು (ಪ್ಲಾಸ್ಟರ್) ಉದುರಿಬಿದ್ದ ಕಾರಣ ಪ್ರಥಮ ವರ್ಷದ ಕಾಮರ್ಸ್ ವಿದ್ಯಾರ್ಥಿಗಳಾದ ಶೀತಲ ಬಸವರಾಜ, ದಿವ್ಯ ಸುಭಾಷ ಹಾಗೂ ಸ್ನೇಹಾ ಕಾಶಿನಾಥ ಎಂಬ ವಿದ್ಯಾರ್ಥಿನಿಯರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಶಾಲಾ‌ ಸಿಬ್ಬಂದಿ ಕೂಡಲೆ ವಿದ್ಯಾರ್ಥಿಗಳನ್ನು ಟ್ರಾಮಾ‌ ಸೆಂಟರ್ ಗೆ ದಾಖಲಿಸಿದ್ದಾರೆ. ಇನ್ನು ಘಟನೆ ಹಿನ್ನೆಲೆಯಲ್ಲಿ‌‌ ಮುನ್ನೆಚ್ಚರಿಕೆ ಕ್ರಮ ಏಕೆ ಕೈಗೊಂಡಿರುವುದಿಲ್ಲ‌ ಎಂಬುದಕ್ಕೆ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.