ನಾರಾಯಣಪುರದಲ್ಲಿ ರಶೀದ್ ಮುತ್ಯಾನ ವಿರುದ್ಧ ದೂರು ನೀಡಿದ ಗ್ರಾಮಸ್ಥರು
ಕಲಬುರಗಿ: ಜೇವರ್ಗಿ ತಾಲೂಕಿನ ನಾರಾಯಣಪುರದಲ್ಲಿ ರಶೀದ್ ಮುತ್ಯಾ ಜನರನ್ನು ವಂಚಿಸುತ್ತಿದ್ದು, ಆತನ ವಿರುದ್ಧ ಎಫ್ಐಆರ್ ಮಾಡಿ, ಗ್ರಾಮದಿಂದ ಗಡಿಪಾರು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ರಶೀದ್ ಮುತ್ಯಾನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಗ್ರಾಮದಲ್ಲಿ ಹೊರ ಭಾಗದ ಜನರನ್ನು ಕರೆತಂದು, ಗನ್ ಮ್ಯಾನ್ ಇಟ್ಟುಕೊಂಡು ಗ್ರಾಮದ ನತೆಗೆ ಧಕ್ಕೆ ತರುತ್ತಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಹಿಂದು, ಮುಸ್ಲಿಮರು ಭಾವೈಕ್ಯದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ದರ್ಗಾದ ಹೆಸರಿನಲ್ಲಿ ಬೇರೆ ಬೇರೆ ಗ್ರಾಮದ ಜನರನ್ನು ಕರೆಸಿ, ಮೌಢ್ಯತೆ ಬಿತ್ತುತ್ತಿದ್ದಾರೆ. ಕೂಡಲೇ ಆತನನ್ನು ಗ್ರಾಮದಿಂದ ಹೊರದೂಡಬೇಕು, ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ಗೆ ಮಲ್ಲಣ್ಣ ಯಲಗೋಡಗೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ಮಡಿವಾಳಪ್ಪ ಅಮರಾವತಿ, ಸಾಯಬಣ್ಣ ಕರ್ಜಗಿ, ಮಾಂತಪ್ಪ ಕುಳಗೇರಿ, ರೇವಣಸಿದ್ದ ಮಾನೆಗಾರ, ಶಿವಲಿಂಗಪ್ಪಗೌಡ ಪಾಟಿಲ್, ಭಗವಂತರಾಯ ಬಿರೆದಾರ, ಸಿದ್ದಲಿಂಗ ಸಾಹುಕಾರ, ದುಂಡು ಬಿರೆದಾರ, ಮುತ್ತಣ್ಣ ಬಿರೆದಾರ, ಶಿವಾನಂದ ಬಿರೆದಾರ ಇತರರಿದ್ದರು.
ಬೂದಿ ಮುಚ್ಚಿದ ಕೆಂಡ: ರಶೀದ್ ಮುತ್ಯಾನ ಪವಾಡಗಳಿಗೆ ಸವಾಲು ಹಾಕಲು ಹೊರಟ್ಟಿದ್ದ ಮಣಿಕಂಠ ರಾಠೋಡ್ ಸೇರಿ ಇತರರನ್ನು ರಸ್ತೆ ಮಧ್ಯೆಯೇ ಪೊಲೀಸರು ತಡೆದರು. ಒಂದು ಕಡೆ ಮುತ್ಯಾನ ಬೆಂಬಲಿಗರು ಘೋಷಣೆ ಕೂಗಿದ್ದು, ಮತ್ತೊಂದು ಕಡೆ ವಿರುದ್ಧ ಘೋಷಣೆಗಳು ಕೂಗಿದ್ದರಿಂದ ಪೊಲೀಸರು ಪರಿಸ್ಥಿತಿ ನಿರ್ವಹಿಸಲು ಹರಸಾಹಸ ಪಟ್ಟರು. ಈ ಮಧ್ಯೆಯೂ ಕೆಲವರ ಮಧ್ಯೆ ಮಾರಾಮಾರಿ ನಡೆದಿದೆ ಎನ್ನಲಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ತಡರಾತ್ರಿವರೆಗೆ ಯಾವುದೇ ದೂರು ದಾಖಲಾಗಿರಲಿಲ್ಲ.