ಆತ್ಮಹತ್ಯೆ ಮಾಡಿಕೊಂಡ ಯುವ ರೈತ ಸಂತೋಷಕುಮಾರ ಬಿರೆದಾರ 
ಕಲಬುರಗಿ

ಮಳೆ ಕೈಕೊಟ್ಟು ಬೆಳೆ ನಾಶ, ಸಾಲದ ಹೊರೆ; ಇಬ್ಬರು ಮಕ್ಕಳನ್ನು ಅಗಲಿದ ರೈತ (Former Sucide)

14 ವರ್ಷದ ಮಗಳು, 12 ವರ್ಷದ ಮಗನ ಭವಿಷ್ಯಕ್ಕೆ ಆಸರೆಯಾಗಬೇಕಿದ್ದ ತಂದೆ ಇನ್ನಿಲ್ಲ

ವಿಜಯವಾಣಿ ಸುದ್ದಿಜಾಲ ಆಳಂದ

ಮಳೆಗಾಗಿ ಆಕಾಶದತ್ತ ಮುಖಮಾಡಿದ್ದ ರೈತನ ಬದುಕಿನಲ್ಲಿ ಬರ ಆವರಿಸಿತು. ಬೆವರು ಸುರಿಸಿ ಬೆಳೆದ ಬೆಳೆ ಕೈಗೆ ಬರಲಿಲ್ಲ. ಮಾಡಿದ ಸಾಲದ ಹೊರೆ ಬೆನ್ನೇರಿತು. ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದ್ದ ರೈತ ಕೊನೆಗೆ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ತಾಲೂಕಿನ ಕುದಮುಡ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ.

ಗ್ರಾಮದ ಸಂತೋಷಕುಮಾರ ಅರುಣಕುಮಾರ ಬಿರೆದಾರ (42) ಮೃತಪಟ್ಟ ರೈತ. ಗ್ರಾಮದ ಸುಭಾಷ್ ಎಂಬುವರ ಹೊಲದಲ್ಲಿನ ವಿದ್ಯುತ್ ಕಂಬಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅವರು ಪತ್ತೆಯಾಗಿದ್ದಾರೆ.

ಬೆಳೆ ಕೈಕೊಟ್ಟಿತು, ಸಾಲ ಬೆನ್ನೇರಿತು!

ಸಂತೋಷಕುಮಾರ ಅವರ ತಾಯಿ ಹೆಸರಿನಲ್ಲಿ ಒಂದು ಎಕರೆ ಆರು ಗುಂಟೆ ಜಮೀನಿತ್ತು. ಇದರೊಂದಿಗೆ ಇತರರ ಹೊಲಗಳನ್ನು ಪಾಲಿನ ಆಧಾರದಲ್ಲಿ ಕೃಷಿ ಮಾಡುತ್ತಾ ಕುಟುಂಬವನ್ನು ನಿರ್ವಹಿಸುತ್ತಿದ್ದರು. ಆದರೆ, ಮುಂಗಾರು ಮತ್ತು ಹಿಂಗಾರು ಮಳೆ ಸಮರ್ಪಕವಾಗಿ ಬಾರದ ಕಾರಣ ಬೆಳೆ ನಷ್ಟವಾಗಿತ್ತು. ಕೃಷಿಗಾಗಿ ಮಾಡಿದ ಖರ್ಚು ಕೈಗೆ ಬರದೆ, ಸಾಲ ತೀರಿಸುವ ದಾರಿಯೂ ಕಾಣದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಅಂಬಲಗಾ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ₹80 ಸಾವಿರ ಸಾಲ ಮಾಡಿದ್ದ ಅವರು, ಖಾಸಗಿಯಾಗಿ ₹7ರಿಂದ ₹8 ಲಕ್ಷದವರೆಗೆ ಕೈಗಡ ಸಾಲ ಪಡೆದಿದ್ದರು ಎಂದು ತಿಳಿದುಬಂದಿದೆ. ಬೆಳೆ ಕೈಕೊಟ್ಟಿದ್ದರಿಂದ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ.

ತಂದೆಯ ಪ್ರೀತಿಯಿಂದ ವಂಚಿತರಾದ ಮಕ್ಕಳು

14 ವರ್ಷದ ಮಗಳು, 12 ವರ್ಷದ ಮಗನಿಗೆ ತಂದೆಯೇ ಬದುಕಿನ ಆಸರೆಯಾಗಿದ್ದರು. ಕುಟುಂಬದ ಜವಾಬ್ದಾರಿ ಹೊತ್ತು ಕೃಷಿ ಮಾಡುತ್ತಿದ್ದ ಸಂತೋಷಕುಮಾರ ಅವರ ಸಾವು ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ದಿಕ್ಕು ತೋಚದ ಸ್ಥಿತಿಗೆ ತಳ್ಳಿದೆ. ಕುಟುಂಬದ ಭವಿಷ್ಯಕ್ಕಾಗಿ ದುಡಿಯಬೇಕಿದ್ದ ತಂದೆ ಇನ್ನಿಲ್ಲ ಎಂಬ ನೋವು ಕುಟುಂಬಸ್ಥರನ್ನು ಕಾಡುತ್ತಿದೆ.

ಪತಿ ಮೃತಪಟ್ಟಿರುವ ಕುರಿತು ಪತ್ನಿ ಅಂಬಿಕಾ ಬಿರೆದಾರ ಅವರು ನರೋಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಎಎಸ್‌ಐ ಶಾಂತಯ್ಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.