ಕಮಲಾಪುರ: ಜೀವಣಗಿ ಬಳಿ ಕಾರ್ಯನಿರ್ವಹಿಸುತ್ತಿರುವ ಇಥೆನಾಲ್ ಕಂಪನಿಯು ಬೆಣ್ಣೆತೊರಾ ಅಣೆಕಟ್ಟಿನ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದು, ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ತಡಕಲ್ ಕ್ರಾಸ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಈ ವರ್ಷ ಸಮರ್ಪಕ ಮಳೆಯಾಗದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಜನರು ಕಿಮೀ. ಗಟ್ಟಲೆ ನಡೆದುಕೊಂಡು ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೂ ಕುಡಿವ ನೀರು ಸಿಗುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಜೀವಣಗಿ ಇಥೆನಾಲ್ ಕಂಪನಿಯು ಬೆಣ್ಣೆತೊರಾ ಅಣೆಕಟ್ಟಿನ ನೀರನ್ನು ಬಳಸುತ್ತಿರುವುದು ಖಂಡನೀಯ ಎಂದರು.
ನಾಗೂರು ಹಜರತ್ ಕಟ್ಟೆ ನವಾಜ್ ದರ್ಗಾ ಸಮೀಪದ ನದಿ ದಡದಲ್ಲಿ 100 ಎಚ್ಪಿ ಸಾಮರ್ಥ್ಯದ ಎರಡು ಮೋಟಾರ್ಗಳನ್ನು ಅಳವಡಿಸಿ, ಸುಮಾರು 3 ಕಿಮೀ. ಉದ್ದದ ಪೈಪ್ಲೈನ್ ಮೂಲಕ ಕಂಪನಿಗೆ ನೀರು ಪೂರೈಸಲಾಗುತ್ತಿದೆ. ಕಂಪನಿಗೆ ನೀರು ಬಳಸಲು ಅನುಮತಿ ನೀಡಿದವರು ಯಾರು ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ತಣ ನೀರು ಪೂರೈಕೆ ಸ್ಥಗಿತಗೊಳಿಸಿ, ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಡಕಲ್ ಕ್ರಾಸ್ ನಿವಾಸಿಗಳಿಗೆ ಸಮರ್ಪಕ ಕುಡಿವ ನೀರು ಪೂರೈಸಬೇಕು. ಸರ್ಕಾರಿ ಶಾಲೆಗೆ ಕಾಂಪೌಂಡ್ ನಿರ್ಮಿಸಿ, ಮಕ್ಕಳಿಗೆ ಪ್ರತಿದಿನ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮುಖ್ಯ ರಸ್ತೆಯಿಂದ ಶಾಲೆವರೆಗೆ ರಸ್ತೆ ನಿರ್ಮಿಸಬೇಕು. ಕ್ರಾಸ್ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಹೇರೂರು ಕ್ರಾಸ್ನ ಕೆಟ್ಟುಹೋಗಿರುವ ಹೈಮಾಸ್ಟ್ ದೀಪ ದುರಸ್ತಿಪಡಿಸಬೇಕು. ನಾಗೂರು ಗ್ರಾಪಂನಲ್ಲಿ 2022ರಿಂದ 2025ರವರೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ಮಹಮ್ಮದ್ ಮೋಹಸಿನ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಪ್ರಮುಖರಾದ ದಿಲೀಪ್ ನಾಗೂರೆ, ಅನಿಲ್ ಗುತ್ತೇದಾರ್, ಶರಣಕುಮಾರ ಅಂಬಲಗಿ, ವಿಶಾಲ ಗುತ್ತೇದಾರ್, ಬಸವರಾಜ ಹೊಸಮನಿ, ಗುರುಸಿದ್ದಪ್ಪ ಏರಿ, ಪ್ರವಿಣ ಅಂಬಲಗಿ, ನಾಗರಾಜ ರಾಜನಾಳ, ಪ್ರಶಾಂತ ಡಬರಬದಿ, ಈರಣ್ಣ ಏರಿ ಇತರರಿದ್ದರು.