ಕಲಬುರಗಿ: ನಾಡಿನ ಮಠಾಧೀಶರ ಬಗ್ಗೆ ಹಗುರವಾಗಿ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚನೆ ಮಾಡಬೇಕು ಎಂದು ಬಿಜೆಪಿ ಮುಖಂಡರಾಗಿರುವ ಮಹಾಜನ ಸೇವಾ ಫೌಂಡೇಷನ್ ಅಧ್ಯಕ್ಷ ಶಿವಕಾಂತ ಮಹಾಜನ ಒತ್ತಾಯಿಸಿದ್ದಾರೆ.
ಸ್ವಾಮೀಜಿಗಳ ಸಮ್ಮುಖದಲ್ಲಿ ಮಾತನಾಡುವಾಗ ಸಿಎಂ ಮನಬಂದಂತೆ ಮಾತನಾಡಿದ್ದಾರೆ. ಅವರ ಮಾತಿನ ಧಾಟಿ ನೋಡಿದಾಗ ಮನಸ್ಸಿನ ಸ್ಥಿಮಿತ ಕಳೆದುಕೊಂಡಂತಿದೆ. ಒಂದು ಹಂತದಲ್ಲಿ ಮಠಾಧೀಶರು ರಾಯಬಾರಿಗಳಾಗಬೇಕು ಎನ್ನುವ ಮೂಲಕ ಅವರನ್ನು ಕಾಂಗ್ರೆಸ್ ಕಾರ್ಯಕರ್ತರಂತೆ ಕಾಣಲು ಹೊರಟಿರುವಂತಿದೆ ಎಂದು ತಿರುಗೇಟು ನೀಡಿದ್ದಾರೆ. ಪೂಜ್ಯರನ್ನು ಸೇವಕರು ಎಂದಿರುವುದು ತರವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಯಂತ ಜವಾಬ್ದಾರಿಯುತ ಸ್ಥಾನದಲ್ಲಿರುವಾಗ ಮಠಾಧೀಶರ ಬಗ್ಗೆ ಗೌರವಯುತವಾಗಿ ಮಾತನಾಡುವುದು ಬಿಟ್ಟು, ಈ ತೆರನಾಗಿ ಹಗುರವಾಗಿ ಮಾತನಾಡಿರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಮಠಾಧೀಶರು, ಸ್ವಾಮಿಜಿಗಳು ಸರ್ಕಾರದ ರಾಯಭಾರಿಗಳಾಗಿ, ಸೇವಕರಾಗಿ ಕೆಲಸ ಮಾಡಿದರೆ ಮುಕ್ತಿ ದೊರೆಯುತ್ತದೆ ಎಂದಿರುವ ಅರ್ಥವೇನು ಎಂದು ಮಹಾಜನ ಖಾರವಾಗಿ ಪ್ರಶ್ನಿಸಿದ್ದಾರೆ.
ಭಕ್ತರಿಗೆ ಮುಕ್ತಿ ಕೊಡಿಸುವ ಕೆಲಸವನ್ನು ಗುರುಗಳಾಗಿ ದೇವರ ರೂಪವಾಗಿ ಸ್ವಾಮೀಜಿಗಳು ಮಾಡಿಕೊಂಡು ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಪೂಜ್ಯರಿಗೆ ಮುಕ್ತಿ ಸಿಗುತ್ತದೆ ಎಂದಿರುವುದು ಅಕ್ಷಮ್ಯ ಅಪರಾಧ. ಮಠಾಧೀಶರಿಗೆ ಮುಕ್ತಿ ದೊರಕಿಸಲು ಸಿಎಂ ಯಾರು ?, ಅವರಿಗೆ ಮುಕ್ತಿ ಬೇಕಾಗಿದ್ದರಿಂದಲೇ ಮಠಾಧೀಶರ ಬಳಿ ಮೇಲಿಂದ ಮೇಲೆ ಹೋಗುತ್ತಾರೆ. ಇದನ್ನು ಅರಿತುಕೊಂಡು ಮಾತನಾಡಲಿ ಎಂದು ತಿಳಿಸಿದ್ದಾರೆ.
ಎಲ್ಲಗೂ ಸ್ವಾಮೀಜಿಗಳು ಮತ್ತು ಮಠಾಧೀಶರ ಬಗ್ಗೆ ಗೌರವಯುತವಾಗಿ ಮಾತನಾಡುತ್ತಾರೆ. ಆದರೆ, ಸಿಎಂ ಡಿ.ಕೆ.ಶಿವಕುಮಾರ ಅನನುಭವಿಯಂತೆ ಮಾತನಾಡಿ, ಖಾವಿಧಾರಿಗಳಿಗೆ ಅಪಮಾನ ಮಾಡಿದ್ದಾರೆ. ಹೀಗಾಗಿ ಕೂಡಲೇ ಕ್ಷಮೆಯಾಚಿಸುವ ಮೂಲಕ ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.