Lokayukth trap 
ಕಲಬುರಗಿ

ಯಡ್ರಾಮಿ ಪಿಎಸ್ಐ, ಪೇದೆ ಲೋಕಾ ಬಲೆಗೆ :ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೆ ಘಟನೆ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಪದಕ ವಿಜೇತ ಅಧಿಕಾರಿಯೇ ಈಗ ಆರೋಪಿ
ಕಲಬುರಗಿ: ಗೃಹ ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ಪಿಎಸ್ ಐ, ಪೇದೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ಸಂಜೆ ನಡೆದಿದೆ.
ಅಕ್ಕಿ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸಹಕಾರ ನೀಡಲು ಉದ್ಯಮಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ವಿಶೇಷ ಶಾಖೆ (ಎಸ್‌ಬಿ) ಸಿಬ್ಬಂದಿ ಗುರುವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಯಡ್ರಾಮಿ ಪೊಲೀಸ್ ಠಾಣೆಯ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಹಾಗೂ ಎಸ್‌ಬಿ ಸಿಬ್ಬಂದಿ ಸಿದ್ದಣ್ಣ ಬಿರಾದಾರ ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಗಳಾಗಿದ್ದಾರೆ.
ರೂ. 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳು
ಆನಂದ ಕುಸ್ತಿ ಎಂಬುವವರ ಅಕ್ಕಿ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಬಿಡಿಕೆ ನೀಡಲು ಹಾಗೂ ಸಹಕಾರ ನೀಡಲು ಆರೋಪಿಗಳು ಒಟ್ಟು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಪೈಕಿ ಜೂನ್ 12ರಂದು ಮುಂಗಡವಾಗಿ 20,000 ರೂಪಾಯಿಗಳನ್ನು ಫೋನ್‌ಪೇ (PhonePe) ಮೂಲಕ ಸ್ವೀಕರಿಸಿದ್ದರು.
ಬಾಕಿ ಉಳಿದ ಹಣದಲ್ಲಿ ಗುರುವಾರ ಯಡ್ರಾಮಿ ಪೊಲೀಸ್ ಠಾಣೆಯ ಆವರಣದಲ್ಲೇ ದೂರುದಾರರಿಂದ ಮತ್ತೊಮ್ಮೆ 20,000 ರೂಪಾಯಿ ಹಣವನ್ನು ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಜಂಟಿ ದಾಳಿ ನಡೆಸಿ, ಇಬ್ಬರನ್ನೂ ರಂಗೇಹಾತಾಗಿ (ಕೈಗೆಂಪು) ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಪದಕ ವಿಜೇತನೇ ಈಗ ಭ್ರಷ್ಟಾಚಾರದ ಆರೋಪಿ!
ಲೋಕಾಯುಕ್ತ ಬಲೆಗೆ ಬಿದ್ದಿರುವ ಪಿಎಸ್‌ಐ ವಿಶ್ವನಾಥ ಮುದರೆಡ್ಡಿ ಅವರು ಈ ಹಿಂದೆ ಗಂಭೀರ ಪ್ರಕರಣಗಳ ತನಿಖೆ ಹಾಗೂ ಆರೋಪಿಗಳ ಬಂಧನದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರ್ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ 2024-25ನೇ ಸಾಲಿನ ಪ್ರತಿಷ್ಠಿತ 'ಮುಖ್ಯಮಂತ್ರಿ ಚಿನ್ನದ ಪದಕ'ನೀಡಿ ಅಂದಿನ ಸಿಎಂ ಸಿದ್ದರಾಮಯ್ಯ ಅವರು ಗೌರವಿಸಿದ್ದರು. ಮುಖ್ಯಮಂತ್ರಿಗಳಿಂದ ಪದಕ ಪಡೆದ ದಕ್ಷ ಅಧಿಕಾರಿಯೇ ಈಗ ಲಂಚದ ಹಣದೊಂದಿಗೆ ಸಿಕ್ಕಿಬಿದ್ದಿರುವುದು ಇಲಾಖೆಯಲ್ಲಿ ತೀವ್ರ ಮುಖಭಂಗ ಉಂಟುಮಾಡಿದೆ.
ಲೋಕಾಯುಕ್ತ ಯಶಸ್ವಿ ಕಾರ್ಯಾಚರಣೆ:
ಲೋಕಾಯುಕ್ತ ಎಸ್‌ಪಿ ಸಿದ್ಧರಾಜು ಅವರ ಮಾರ್ಗದರ್ಶನದಲ್ಲಿ, ಇನ್‌ಸ್ಪೆಕ್ಟರ್ ಅರುಣ್ ಮರಗುಂಡಿ ನೇತೃತ್ವದಲ್ಲಿ ಈ ಯಶಸ್ವಿ ದಾಳಿ ಜರುಗಿದೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿಗಳಾದ ಮಲ್ಲಿನಾಥ, ರಾಣೋಜಿ, ಬಸವರಾಜ ಸೇರಿದಂತೆ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. ಠಾಣೆಯ ಆವರಣದಲ್ಲೇ ನಡೆದ ಈ ಲೋಕಾಯುಕ್ತ ಬೇಟೆ ಪೊಲೀಸ್ ಇಲಾಖೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ಹಾಗೂ ಚರ್ಚೆಗೆ ಗ್ರಾಸವಾಗಿದೆ.