ಜೇವರ್ಗಿ ತಾಲೂಕಿನ ಶಖಾಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ರಂಭಾಪುರಿ ಜಗದ್ಗುರುಗಳು, ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು, ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು ಇತರರಿದ್ದರು. 
ಕಲಬುರಗಿ

ಹಸಿದವರಿಗೆ ಅನ್ನ ನೀಡುವುದೂ ಧರ್ಮ

ಜೇವರ್ಗಿ: ವಿವಿಧತೆಯಲ್ಲಿ ಏಕತೆ ಕಾಣುವ ಭಾರತೀಯರ ಸಂಸ್ಕೃತಿ ವೈಶಿಷ್ಟಪೂರ್ಣವಾಗಿದೆ. ಗ್ರಾಮೀಣ ಸಂಸ್ಕೃತಿಯ ಪರಿಪಾಲನೆ ಮತ್ತು ಪುನರುತ್ಥಾನದಿಂದ ಮಾನವೀಯ ಸಂಬಂಧಗಳು ಸುಭದ್ರವಾಗಿ ಬೆಳೆಯಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶಖಾಪುರ ತಪೋವನ ಮಠದಲ್ಲಿ ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳ 76ನೇ ಪುಣ್ಯಸ್ಮರಣೆ ಮತ್ತು ರೈತರ ರೊಟ್ಟಿ ಜಾತ್ರೆ ಅಂಗವಾಗಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಧರ್ಮಸಭೆಯಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ತಪೋವನ ಮಠದ ಶ್ರೀ ಸಿದ್ಧರಾಮೇಶ್ವರ ಶಿವಯೋಗಿಗಳು ತಮ್ಮ ಬದುಕಿನುದ್ದಕ್ಕೂ ಅಧ್ಯಾತ್ಮ, ಮಾನವೀಯತೆ, ಸಮಾನತೆ, ಸೇವೆ ಮತ್ತು ಪರೋಪಕಾರದ ಮಹತ್ವ ಸಾರಿದ ಮಹಾನುಭಾವರು ಎಂದು ಬಣ್ಣಿಸಿದರು.

ಧರ್ಮವೆಂದರೆ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ, ಹಸಿದವರಿಗೆ ಅನ್ನ ನೀಡುವುದು, ದುಡಿವ ಕೈಗಳನ್ನು ಗೌರವಿಸುವುದು, ಸಮಾಜದಲ್ಲಿ ಪ್ರೀತಿ ಮತ್ತು ಸಹಬಾಳ್ವೆಯನ್ನು ಬೆಳೆಸುವುದಾಗಿದೆ. ರೊಟ್ಟಿ ನಮ್ಮ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗ. ಜೋಳ, ಸಜ್ಜಿ, ರಾಗಿ, ನವಣಿ ಸೇರಿ ಸಿರಿಧಾನ್ಯಗಳಿಂದ ತಯಾರಿಸುವ ರೊಟ್ಟಿಗಳು ನಮ್ಮ ಪೂರ್ವಜರ ಆಹಾರ ಸಂಸ್ಕೃತಿಯ ಪ್ರತಿಕವಾಗಿವೆ. ಗ್ರಾಮೀಣ ಮಹಿಳೆಯರ ಪರಿಶ್ರಮ ಮತ್ತು ನಮ್ಮೆ ನೆಲದ ಪರಂಪರೆಯ ಜೀವಂತ ಸಂಕೇತಗಳಾಗಿವೆ ಎಂದು ವರ್ಣಿಸಿದರು.

ಸಣ್ಣ ನೀರಾವರಿ ಮತ್ತು ವಿಜ್ಞಾನ-ತಂತ್ರಜ್ಞಾನ ಸಚಿವ ಡಾ.ಅಜಯ ಧರ್ಮಸಿಂಗ್​ ಮಾತನಾಡಿ, ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಸಿರಿ ಧಾನ್ಯಗಳ ಮಹತ್ವವನ್ನು ಮತ್ತೆ ಜನರಿಗೆ ಪರಿಚಯಿಸುವ ಅಗತ್ಯವಿದೆ. ಜೋಳ, ಸಜ್ಜಿ ರೊಟ್ಟಿ ಮತ್ತು ರಾಗಿ ಮುದ್ದೆ ವಿವಿಧ ಬಗೆಯ ಗ್ರಾಮೀಣ ಆಹಾರ ಪದಾರ್ಥಗಳು ನಮ್ಮ ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿವೆ. ಪೌಷ್ಟಿಕಾಂಶಗಳಿಂದ ಸಮೃದ್ಧಿಯಾಗಿದ್ದು, ಸಾಂಪ್ರದಾಯಿಕ ಆಹಾರವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಜಾತ್ರೆಯ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.

ತಪೋವನ ಮಠದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ, ರೈತ ಉಳಿದರೆ ದೇಶ ಉಳಿಯುತ್ತದೆ. ಕೃಷಿ ಬೆಳೆದರೆ ಸಂಸತಿ ಉಳಿಯುತ್ತದೆ. ಅನ್ನ ಉಳಿದರೆ ಮಾನವೀಯತೆ ಉಳಿಯುತ್ತದೆ ಎಂಬ ಮಹತ್ತರ ಸಂದೇಶ ಸಾರುವ ರೊಟ್ಟಿ ಜಾತ್ರೆಯಲ್ಲಿ ಅಸಂಖ್ಯ ಜನ ಪಾಲ್ಗೊಂಡಿರುವುದು ಖುಷಿ ತಂದಿದೆ ಎಂದು ಹೇಳಿದರು.

ಸೇಡಂ ಶ್ರೀ ಸದಾಶಿವ ಸ್ವಾಮೀಜಿ, ಓಂಕಾರ ಬೆನ್ನೂರು ಶ್ರೀ ಸಿದ್ಧರೇಣುಕ ಶಿವಾಚಾರ್ಯರು, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ, ಶಿವರಾಜ ಪಾಟೀಲ್​ ರದ್ದೇವಾಡಗಿ, ಶಿವಶರಣಪ್ಪ ಸೀರಿ, ನಂದಕುಮಾರ ಝವಾರ, ಚನ್ನಮಲ್ಲಯ್ಯ ಹಿರೇಮಠ, ಶಂಕರಗೌಡ ಹಾಲಗಡ್ಲಾ, ಕಲ್ಯಾಣಕುಮಾರ ಸಂಗಾವಿ, ಅಂಬರೀಶ ಶಖಾಪುರ, ಬಸವರಾಜ ಪಾಟೀಲ್​ ಮುಡಬಿ, ಭುಜಂಗಪ್ಪ ದೆಶೆಟ್ಟಿ, ರೇವಣಸಿದ್ದಪ್ಪ ಸಂಕಾಲಿ, ಡಾ.ಪಿ.ಎಂ ಮಠ, ವಿರೇಶ ಕಂದಗಲ್​, ಐ.ಎಸ್​.ಹಿರೇಮಠ, ಪ್ರಶಾಂತ ಕೇರಿ ಸೇಡಂ, ಮಿತ್ತು ಸಾಹು ನೀಲಹಳ್ಳಿ, ನಾಗಪ್ಪಗೌಡ ಬಿದರಛಡಿ, ಮಲ್ಲು ಸಾಹು ಹಂಗನಳ್ಳಿ, ಸೂರ್ಯಕಾಂತ ಹಂಗನಳ್ಳಿ, ವಿಶ್ವನಾಥ ವಿಶ್ವಕರ್ಮ, ಅರ್ಜುನಪ್ಪ ರಾಯಕೋಡ ಪಾಲ್ಗೊಂಡಿದ್ದರು.

ಶ್ರೀಮತಿ ಕೆಸರಬಾಯಿ ನಶಾಮದಾಸ್​ ಝುವಾರ ವಿದ್ಯಾರ್ಥಿನಿಯರ ವಸತಿ ನಿಲಯ ಉದ್ಘಾಟನೆ ನೆರವೇರಿತು. ಕೃಷಿ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯರು ಸ್ವಾಗತಿಸಿ ನಿರೂಪಣೆ ಮಾಡಿದರು.

ಸಮಾರಂಭಕ್ಕೂ ಮುನ್ನ ಪ್ರಮುಖ ಬೀದಿಗಳಲ್ಲಿ ರಂಭಾಪುರಿ ಜಗದ್ಗುರುಗಳ ಅದ್ದೂರಿ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿತು. ಬಳಿಕ ಅಸಂಖ್ಯ ಭಕ್ತರ ಜೈೂಷದೊಂದಿಗೆ ಜೋಡು ರಥೋತ್ಸವ ನಡೆಯಿತು. ಅಪಾರ ಭಕ್ತರು ಪ್ರಸಾದ ಸೇವಿಸಿ ಕೃತಾರ್ಥರಾದರು.

ಭಾರತೀಯ ಸಂಸ್ಕೃತಿಯಲ್ಲಿ ಅನ್ನಕ್ಕೆ ಪವಿತ್ರ ಸ್ಥಾನವಿದೆ. ಅನ್ನವನ್ನು ಬೆಳೆಯುವ ರೈತನು ಸಮಾಜದ ಜೀವನಾಡಿಯಾಗಿದ್ದಾನೆ. ರೈತನ ಶ್ರಮದ ಮಹತ್ವ ಜನಮಾನಸದಲ್ಲಿ ಬಿತ್ತುವ ಉದ್ದೇಶದಿಂದ ಡಾ.ಸಿದ್ಧರಾಮ ಶಿವಾಚಾರ್ಯರು ರೊಟ್ಟಿ ಜಾತ್ರೆ ಆಯೋಜಿಸುತ್ತರಿವುದು ಶ್ರೇಷ್ಠ ಕಾರ್ಯವಾಗಿದೆ.
> ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು, ಬಾಳೆಹೊನ್ನೂರು