ಚಿತ್ತಾಪುರ: ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿರುವ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಸೂಕ್ತ ಸೌಕರ್ಯ ಕಲ್ಪಿಸಬೇಕು ಎಂದು ಕೊಳೆಗೇರಿ ಅಭಿವೃದ್ಧಿ ಮಂಡಳಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಲಕ್ಷ್ಮೀಕಾಂತ ತಾಂಡೂರಕರ್ ಆಗ್ರಹಿಸಿದರು. ದಿಗ್ಗಾಂವ್ ಮತ್ತು ಸಾತನೂರ ರಸ್ತೆಯಲ್ಲಿರುವ ಕೊಳೆಗೇರಿ ಬಡಾವಣೆ ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಪುರಸಭೆ ವ್ಯವಸ್ಥಾಪಕರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದ್ದು, ಅಗತ್ಯ ಸೌಲಭ್ಯವಿಲ್ಲದೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಬೀದಿ ದೀಪ ಅಳವಡಿಸಬೇಕು. ನಿತ್ಯ ಕಸ ವಿಲೇವಾರಿ ಮಾಡಬೇಕು. ಪ್ರತಿ ಬ್ಲಾಕ್ನಲ್ಲಿ ಕಸ ಶೇಖರಣೆ ಡಬ್ಬಿ ವ್ಯವಸ್ಥೆ ಮಾಡಬೇಕು. ಪ್ರತಿ ದಿನ ನೀರು ಸರಬರಾಜಿಗೆ ಪಂಪ್ ಅಪರೇಟರ್ ನೇಮಿಸಬೇಕು. ಒಡೆದಿರುವ ಕುಡಿವ ನೀರಿನ ಪೈಪ್ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಕೃಷ್ಣ ಭೋವಿ, ತಿಮ್ಮು ತಾಂಡೂರಕರ್, ಶಂಭು ಭೋವಿ, ಅಂಬು ಚವ್ಹಾಣ್, ರಾಜು ಗುತ್ತೇದಾರ್, ಸುನೀಲ್ ಪವಾರ್, ದೀಲಿಪ್ ಕಟಗೆ, ಪರಶುರಾಮ ರಾಜಾಪೂರ, ಚಿದಾನಂದ ಕಾಶಿ, ನಾಗು ಹೋಳಿಕಟ್ಟಿ, ಸೂರ್ಯಕಾಂತ, ರಾಜು ಭಜಂತ್ರಿ, ಸಂತೋಷ ಭಂಗಿ ಇತರರಿದ್ದರು.