Kaskota 
ಕಲಬುರಗಿ

ಕಸ್ಕೊಟಾದಿಂದ ಹಾನಿಯಾದ ರೈತರಿಗೆ ಪರಿಹಾರ, ಔಷಧಕ್ಕೆ ಪ್ರತಿಭಟನೆ

ಚಿಂಚೋಳಿ: ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ವಿಶ್ವಗುರು ಬಸವೇಶ್ವರ ವೃತ್ತದ ವರೆಗೆ ಈರುಳ್ಳಿ, ತೊಗರಿ ಬೆಳೆಗೆ ಆವರಿಸಿಕೊಂಡ ಕಸ್ಕೊಟಾ ಕಳೆಯೊಂದಿಗೆ ರೈತರು ಬೃಹತ್ ಮೆರವಣಿಗೆ ನಡೆಸಿ ಪ್ರತಿಭಟಿಸಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಮುಖಂಡ ಗೋಪಾಲ ಎಂ.ಪಿ ಗಾರಂಪಳ್ಳಿ ಮಾತನಾಡಿ ಕಲಬುರ್ಗಿ ಜಿಲ್ಲೆ ತೊಗರಿ ನಾಡು ಎಂಬ ಹೆಗ್ಗಳಿಕೆ ಹೊಂದಿದ್ದು, ಇದೀಗ ಕಳೆದ ಮೂರು ವರ್ಷಗಳಿಂದ ಕಸ್ಕೊಟಾ ಕಳೆ ರೈತರ ತೊಗರಿ, ಉದ್ದು, ಹೆಸರು, ಈರುಳ್ಳಿ, ವಿಳೆದೆಲೆ ಸೇರಿದಂತೆ ನಾನಾ ಬೆಳೆಗಳಿಗೆ ಆವರಿಸಿಕೊಂಡು ಹಾನಿ ಮಾಡುತ್ತಿದ್ದು, ಸರಕಾರವು ವಿಜ್ಞಾನಿಗಳ ವರದಿ ಆಧರಿಸಿ ಕರಪತ್ರ, ಧ್ವನಿ ಸುರಳಿ ಬಿಡುಗಡೆ ಮಾಡಿ ಮಾರಕ ಕಳೆಯಾಗಿದೆ ಎಂದು ಜಾಗೃತಿ ಮೂಡಿಸುತ್ತಿದೆ ವಿನಹ ಪರಿಹಾರ, ಔಷಧಿ ಕುರಿತು ಕೃಷಿ ಮಂತ್ರಿಗಳು ಮಾತನಾಡಿಲ್ಲ. ರೈತರ ಬದುಕಿಗೆ ಆಸರೆಯಾಗಬೇಕಾದ ಸರಕಾರವು ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅದೇ ರೀತಿ ಹೋರಾಟವನ್ನು ಉದ್ದೇಶಿಸಿ ಕೆ.ಎಂ.ಬಾರಿ, ಯಲ್ಲಾಲಿಂಗ ದಂಡಿನ್, ವೀರೇಶ್ ಯಂಪಳ್ಳಿ, ಹಣಮಂತ ಪೂಜಾರಿ, ಶಿವಕುಮಾರ ಅಂಬಲಗಿ ಸೇರಿದಂತೆ ಅನೇಕರು ಹೋರಾಟವನ್ನು ಉದ್ದೇಶಿಸಿ ಮಾತನಾಡಿ ಕೂಡಲೇ ಕಸ್ಕೊಟಾ ನಿಯಂತ್ರಣ ಕ್ರಮಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು. ಎಕರೆಗೆ 25 ಸಾವಿರ ರೂ. ನೀಡಬೇಕು. ಕಸ್ಕೊಟಾ ನಿಯಂತ್ರಣಕ್ಕೆ ಸಂಶೋಧನೆ ನಡೆಸಿ ಔಷಧಿ ಕಲ್ಪಿಸಬೇಕು ಎಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಈ ಹೋರಾಟದಲ್ಲಿ ರೇವಣಸಿದ್ದಪ್ಪ ಪೂಜಾರಿ, ಶ್ರೀಮಂತ ಕಟ್ಟಿಮನಿ, ಹಣಮಂತ ಕೆ. ಪೂಜಾರಿ, ಖಲೀಲ ಪಟೇಲ, ಸುಭಾಷ ಕೊಂಡಾ, ರಾಜು ಯಂಪಳ್ಳಿ, ಚಂದ್ರಶೇಟ್ಟಿ ಮರಪಳ್ಳಿ, ಹಣಮಂತ ಭೋವಿ, ಮೌನೇಶ ಮುಸ್ತಾರಿ, ಹುಸ್ಮಾನ ಅಲಿ, ಪ್ರಭು ಭೋವಿ, ವೆಂಕಟರೆಡ್ಡಿ, ವೀರಶೇಟ್ಟಿ ಮಗಿ, ಅಮೃತ ಮಡಿವಾಳ, ರುಕ್ಮೀಣಿ ಸೇರಿದಂತೆ ಅನೇಕರು ಇದ್ದರು.