ಡಿ.ಸಿ. 
ಕಲಬುರಗಿ

ಫೆ.28 ರಿಂದ ಮಾ.17ರ ವರೆಗೆ ದ್ವಿತೀಯ ಪಿ.ಯು.ಸಿ ಪರೀಕ್ಷೆ-:*ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ

ಕಲಬುರಗಿ: ಕಲಬುರಗಿ ಜಿಲ್ಲೆಯಾದ್ಯಂತ ಇದೇ ಫೆಬ್ರವರಿ 28 ರಿಂದ ಮಾರ್ಚ್ 17ರ ವರೆಗೆ ಕಲಬುರಗಿ ನಗರದ 25 ಸೇರಿ ಒಟ್ಟಾರೆ ಜಿಲ್ಲೆಯಾದ್ಯಂತ 51 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆ-1 ಜರುಗಲಿದ್ದು, ಪರೀಕ್ಷೆ ಶಾಂತಿಯುತವಾಗಿ ನಡೆಯಲು ಪರೀಕ್ಷೆ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ಪ್ರದೆಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಆದೇಶ ಹೊರಡಿಸಿದ್ದಾರೆ.
ಕಲಬುರಗಿ ನಗರದಲ್ಲಿ 25, ಕಮಲಾಪೂರ-2, ಜೇವರ್ಗಿ-4, ಆಳಂದ-5, ಅಫಜಲಪೂರ-4, ಕಾಳಗಿ-1, ಚಿಂಚೋಳಿ-3, ಚಿತ್ತಾಪುರ-2, ಶಹಾಬಾದ-3 ಹಾಗೂ ಸೇಡಂ-2 ಸೇರಿ ಒಟ್ಟಾರೆ 51 ಕೇದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಬಿ.ಎನ್.ಎಸ್.ಎಸ್ ಕಾಯ್ದೆ-2023ರ ಕಲಂ 163 ರನ್ವಯ ಜಿಲ್ಲಾ ದಂಡಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ.
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಪರೀಕ್ಷೆ ಕೇಂದ್ರದ 200 ಮೀಟರ್ ಸುತ್ತ ಪ್ರದೇಶದಲ್ಲಿ ಬರುವ ಎಲ್ಲಾ ಜೆರಾಕ್ಸ್ ಅಂಗಡಿಗಳು, ಪುಸ್ತಕ ಅಂಗಡಿಗಳು ಮತ್ತು ಕಂಪ್ಯೂಟರ್ / ಸೈಬರ್ ಅಂಗಡಿಗಳು ಮುಚ್ಚುವಂತೆ ಆದೇಶಿಸಲಾಗಿದೆ. ಇದಲ್ಲದೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಿಬ್ಬಂದಿ ವರ್ಗದವರು ಹೊರತುಪಡಿಸಿ. ಯಾವುದೇ ಬೇರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ ಪ್ರದೇಶದಲ್ಲಿ ಮೊಬೈಲ್ ಫೋನ್, ಪೇಜರ್, ಬ್ಯುಟೂತ್, ವೈರಲ್ಸ್ ಸೆಟ್ ಗಳು ಹಾಗೂ ಇತ್ಯಾದಿ ಎಲೆಕ್ಟ್ರಾನಿಕ ವಸ್ತುಗಳನ್ನು ಉಪಯೋಗಿಸುವುದನ್ನು ಸಹ ಕರ್ನಾಟಕ ಪೊಲೀಸ್ ಅಧಿನಿಯಮ-1963ರ ಕಲಂ-35(ಸಿ) ರಡಿಯಲ್ಲಿ ನಿಷೇಧಿಸಿ ಡಿ.ಸಿ. ಅವರು ಆದೇಶ ಮಾಡಿದ್ದಾರೆ.