ಕಲಬುರಗಿ: ತ್ವರಿತ ತಾಂತ್ರಿಕ ಪ್ರಗತಿ ಮತ್ತು ಬದಲಾಗುತ್ತಿರುವ ಶೈಕ್ಷಣಿಕ ಪರಿಸರಕ್ಕೆ ಅನುಗುಣವಾಗಿ ಪ್ರಾಧ್ಯಾಪಕರು ತಮ್ಮ ಜ್ಞಾನ ಹಾಗೂ ಕೌಶಲ ನಿರಂತರ ನವೀಕರಿಸಿಕೊಳ್ಳಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸಲಹೆ ನೀಡಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಹೈದರಾಬಾದ್ನ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ದಕ್ಷಿಣ ಪ್ರಾದೇಶಿಕ ಕೇಂದ್ರದ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಟೈಮ್ ಸಿರೀಸ್ ಮತ್ತು ಪ್ಯಾನಲ್ ಡೇಟಾ ವಿಶ್ಲೇಷಣೆ ಕುರಿತ ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ಶಿಕ್ಷಕರು ಸದಾ ಕಲಿಯುವ ಮನೋಭಾವ ಬೆಳೆಸಿಕೊಳ್ಳಬೇಕು. ಬದಲಾಗುತ್ತಿರುವ ಕಾಲಟ್ಟದಲ್ಲಿ ಹೆಚ್ಚುತ್ತಿರುವ ಸ್ಪರ್ಧೆ ಎದುರಿಸಲು ಹೊಸ ಜ್ಞಾನ ಸಂಪಾದಿಸುವುದು ಮತ್ತು ಕೌಶಲ ಅಭಿವೃದ್ಧಿಪಡಿಸಿಕೊಳ್ಳುವುದು ಅತ್ಯಗತ್ಯ ಎಂದು ಹೇಳಿದರು.
ಆರ್ಥಿಕ ನೀತಿಗಳು ಕೇವಲ ಸೈದ್ಧಾಂತಿಕ ಚಿಂತನೆಗಳಿಗೆ ಸೀಮಿತವಾಗದೆ, ಕಚೇರಿಗಳಲ್ಲಿ ಕುಳಿತು ರೂಪಿಸುವುದಕ್ಕಿಂತ ಜನರ ನೈಜ ಅಗತ್ಯ, ಸಮಸ್ಯೆ ಮತ್ತು ಸ್ಥಳಿಯ ಪರಿಸ್ಥಿತಿ ಆಧರಿಸಿರಬೇಕು. ಆರ್ಥಿಕ ನೀತಿ ರೂಪಿಸುವ ಮೊದಲು ನೀತಿ ನಿರೂಪಕರು ಮತ್ತು ಸಂಶೋಧಕರು ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳಿಯ ಜನರೊಂದಿಗೆ ಸಂವಾದ ನಡೆಸುವ ಮೂಲಕ ಅವರ ಸಮಸ್ಯೆ ಮತ್ತು ಅಗತ್ಯ ಅರಿತುಕೊಳ್ಳಬೇಕು. ಸ್ಥಳಿಯ ಪರಿಸ್ಥಿತಿಗೆ ಅನುಗುಣವಾದ ನೀತಿ ರೂಪಿಸಿದಾಗ ಮಾತ್ರ ಅವು ಸಮಾಜಕ್ಕೆ ಪರಿಣಾಮಕಾರಿಯಾಗಿ ಪ್ರಯೋಜನ ನೀಡಲು ಸಾಧ್ಯ ಎಂದು ಹೇಳಿದರು.
ವಾಣಿಜ್ಯ ಅಧ್ಯಯನ ನಿಕಾಯದ ಡೀನ್ ಪ್ರೊ.ಪಾಂಡುರಂಗ ಪತ್ತಿ ಮಾತನಾಡಿ, ಈ ಕಾರ್ಯಕ್ರಮವು ಅಧ್ಯಾಪಕರ ವಿಶ್ಲೇಷಣಾತ್ಮಕ ಸಾಮರ್ಥ್ಯ ಮತ್ತು ಸಂಶೋಧನಾ ಕೌಶಲ ಹೆಚ್ಚಿಸುವುದರ ಜತೆಗೆ ಅವರ ಶೈಕ್ಷಣಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಪೂರಕವಾಗಲಿದೆ ಎಂದರು.
ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದ ಮುಖ್ಯಸ್ಥ ಡಾ.ಎಸ್.ಲಿಂಗಮೂರ್ತಿ ಮಾತನಾಡಿದರು. ಕುಲಸಚಿವ ಪ್ರೊ.ಆರ್.ಆರ್.ಬಿರಾದಾರ್, ಡಾ.ಕೃಷ್ಣ ರೆಡ್ಡಿ ಚಿತ್ತೇಡಿ, ಡಾ.ಗಿರೀಶ್ ಆರಾಧ್ಯ, ಡಾ.ಜಾಧವ್ ಚಕ್ರಧರ್, ಡಾ.ಪೆಡ್ಡಿ ದಯಾಕರ್, ಡಾ.ಸುಮಾ ಸ್ಕಾರಿಯಾ, ಡಾ.ಬಸವರಾಜ್ ಎಂ., ಡಾ.ಬಾಬು ನಲ್ಲಸಾಮಿ, ಡಾ.ಅನುಶ್ರೀ ಎಸ್.ಪಣಿಕ್ಕಸ್ಸೆರಿ ಇತರರಿದ್ದರು. ಡಾ.ಮಲ್ಲೇಶ್ ಉಮ್ಮಲ್ಲ ವರದಿ ಮಂಡಿಸಿ, ವಂದಿಸಿದರು.
ಸಂಶೋಧನೆ ಮತ್ತು ನಾವೀನ್ಯತೆಗೆ ಆದ್ಯತೆ ನೀಡುವ ಮೂಲಕ ಪರಿಣಾಮಕಾರಿ ಅಭಿವೃದ್ಧಿ ಕಾರ್ಯತಂತ್ರ ರೂಪಿಸುವಲ್ಲಿ ವಿಶ್ವವಿದ್ಯಾಲಯಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪ್ರಮುಖ ಪಾತ್ರ ವಹಿಸಬೇಕು. ಅಧ್ಯಾಪಕರು ನಿರಂತರ ಕಲಿಕೆ, ಜ್ಞಾನ ವಿನಿಮಯ ಹಾಗೂ ಹೊಸ ವಿಧಾನಗಳ ಅಳವಡಿಕೆಗೆ ಒತ್ತು ನೀಡಿ ತಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಸಾಮರ್ಥ್ಯ ಮತ್ತಷ್ಟೂ ಹೆಚ್ಚಿಸಿಕೊಳ್ಳಬೇಕು.> ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ