ಕಲಬುರಗಿಯ ಶರಣಬಸವ ವಿವಿಯಲ್ಲಿ ಬುಧವಾರ ಆಯೋಜಿಸಿದ್ದ ಐಇಟಿಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯಲ್ಲಿ ವಿಧಾನ ಪರಿಷತ್​ ಸದಸ್ಯ ಶಶೀಲ್​ ನಮೋಶಿ, ಬಸವರಾಜ ದೇಶಮುಖ, ಡಾ.ಅನಿಲಕುಮಾರ ಬಿಡವೆ, ಡಾ.ಬಸವರಾಜ ಗಾದಗೆ, ಡಾ.ಲಕ್ಷ್ಮೀ ಪಾಟೀಲ್​ ಮಾಕಾ, ಡಾ.ಸುಜಾತಾ ಮಲ್ಲಾಪೂರ್​ ಇತರರಿದ್ದರು. 
ಕಲಬುರಗಿ

ಸಂಶೋಧನಾ ಚಟುವಟಿಕೆಗೆ ಆದ್ಯತೆ ಅಗತ್ಯ

ಕಲಬುರಗಿ: ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆ ಸಾಧಿಸಲು ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣದ ಮಾನದಂಡ ತಲುಪಲು ಶಿಕ್ಷಣ ಸಂಸ್ಥೆಗಳು ಸಂಶೋಧನಾ ಚಟುವಟಿಕೆಗೆ ಆದ್ಯತೆ ನೀಡುವುದು ಅಗತ್ಯ ಎಂದು ವಿಧಾನ ಪರಿಷತ್​ ಸದಸ್ಯ ಶಶೀಲ್​ ನಮೋಶಿ ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಭಾರತೀಯ ಎಲೆಕ್ಟ್ರಾನಿಕ್ಸ್​ ಮತ್ತು ಟೆಲಿಕಮ್ಯುನಿಕೇಷನ್ಸ್​ ಇಂಜಿನಿಯರಿಂಗ್​ (ಐಇಟಿಇ) ಸಂಸ್ಥೆಯ 73ನೇ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ನಿರ್ಧರಿಸುವಲ್ಲಿ ಗುಣಮಟ್ಟದ ಸಂಶೋಧನಾ ಫಲಿತಾಂಶ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ಸಂಶೋಧನಾ ಚಟುವಟಿಕೆಗಳಿಗೆ ನೀಡುವ ಆದ್ಯತೆ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಪಿಡಿಎ ಇಂಜಿನಿಯರಿಂಗ್​ ಕಾಲೇಜಿನ 35 ಸಾವಿರ ಚದರ ಅಡಿ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಉದ್ಯಾನವನ (ಟೆಕ್​ಪಾರ್ಕ್​) ಸ್ಥಾಪಿಸುವ ಪ್ರಸ್ತಾವನೆಗೆ ಅನುಮೋದನೆ ದೊರೆತಿದ್ದು, ಶೀಘ್ರ ಕಾಮಗಾರಿ ಆರಂಭವಾಗಲಿದೆ. ಪ್ರಸ್ತಾವಿತ ಟೆಕ್​ಪಾರ್ಕ್​ ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ತಮ್ಮ ಹೊಸ ಆಲೋಚನೆ ಅನ್ವೇಷಿಸಲು ಮತ್ತು ತಾವು ರೂಪಿಸಿದ ಯೋಜನೆಗಳ ಮೇಲೆ ಕಾರ್ಯನಿರ್ವಹಿಸಲು ಉತ್ತಮ ವೇದಿಕೆ ಒದಗಿಸಲಿದೆ ಎಂದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ನಮೋಶಿ ಅವರ ಅನುಭವ ಹಾಗೂ ಸೇವೆ ಪರಿಗಣಿಸಿ ಸಚಿವ ಸ್ಥಾನ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಐಇಟಿಇ ಸಂಸ್ಥೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ.ಬಸವರಾಜ ಗದಗೆ ಹಾಗೂ ಆಡಳಿತ ಮಂಡಳಿಗೆ ಆಯ್ಕೆಯಾಗಿರುವ ವಿಟಿಯು ಕಲಬುರಗಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಡಾ.ಶುಭಾಂಗಿ ಅವರನ್ನು ಸತ್ಕರಿಸಲಾಯಿತು.

ಶರಣಬಸವ ವಿವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ ಅಧ್ಯಕ್ಷತೆ ವಹಿಸಿದ್ದರು. ಸಂಶೋಧನಾ ವಿಭಾಗದ ಡೀನ್​ ಹಾಗೂ ಐಇಟಿಇ ಕಲಬುರಗಿ ಟಕದ ಅಧ್ಯೆಕ್ಷ ಡಾ.ಸುಜಾತಾ ಮಲ್ಲಾಪುರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಸ್​.ಶ್ರೀದೇವಿ ವಂದಿಸಿದರು.

ತಮಿಳುನಾಡು ಮಾದರಿ ಅನುಸರಿಸಿ

ಸಂಶೋಧನಾ ಚಟುವಟಿಕೆ ಉತ್ತೇಜಿಸಲು ಹಾಗೂ ಮೂಲಸೌಕರ್ಯ ಸುಧಾರಿಸಲು ಎಐಸಿಟಿಇ ಯುಜಿಸಿ ಮತ್ತು ಇತರ ಕೇಂದ್ರ ಮಟ್ಟದ ಪ್ರಮುಖ ಸಂಸ್ಥೆಗಳಲ್ಲಿ ಲಭ್ಯವಿರುವ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಖಾಸಗಿ ಶಿಕ್ಷಣ ಸಂಸ್ಥೆಗಳು ಪರಸ್ಪರ ಕೈಜೋಡಿಸಬೇಕು. ಸಂಸ್ಥೆಗಳಲ್ಲಿ ಲಭ್ಯವಿರುವ ಅನುದಾನ ಬಳಸಿಕೊಳ್ಳುವಲ್ಲಿ ಕರ್ನಾಟಕ ಹಿಂದುಳಿದಿದ್ದು, ಅನುದಾನ ಸಮರ್ಪಕವಾಗಿ ಬಳಸಿಕೊಳ್ಳುವ ಕೆಲವೇ ರಾಜ್ಯಗಳಲ್ಲಿ ಒಂದಾಗಿರುವ ತಮಿಳುನಾಡು ಮಾದರಿ ಕರ್ನಾಟಕ ಅನುಸರಿಸಬೇಕು ಎಂದು ಎಂಎಲ್​ಸಿ ಶಶೀಲ್​ ನಮೋಶಿ ಅಭಿಪ್ರಾಯಪಟ್ಟರು.

ಈಶಾನ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಶಿಕ್ಷಕ ಸಮುದಾಯಕ್ಕೆ ಕೃತಜ್ಞತೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಆಯಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಬೇಡಿಕೆ ಈಡೇರಿಸಲು ಶ್ರಮಿಸುವೆ.
> ಶಶೀಲ್​ ನಮೋಶಿ, ವಿಧಾನ ಪರಿಷತ್​ ಸದಸ್ಯ