ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ)ಯ 60ನೇ ವರ್ಷದ ವಜ್ರ ಮಹೋತ್ಸವ ನ.28, 29 ಮತ್ತು 30ರಂದು ನಡೆಯಲಿದ್ದು, ಸಮಾರಂಭದ ನಿಮಿತ್ತ ವಿವಿಧ ಕಾರ್ಯಕ್ರಮ ನಿರಂತರ ನಡೆಸಲಾಗುತ್ತಿದೆ ಎಂದು ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ ಹೇಳಿದರು.
ಕೆಕೆಸಿಸಿಐ ಸಭಾಂಗಣದಲ್ಲಿ ವಜ್ರ ಮಹೋತ್ಸವ ನಿಮಿತ್ತ ಭಾನುವಾರ ಆಯೋಜಿಸಿದ್ದ "ಉದ್ಯೋಗ ಸೇತು' ಉದ್ಯೋಗ ಮೇಳದ ಮೊದಲ ಹಂತದ ಪೂರ್ವ ಮಾರ್ಗದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಉದ್ಯೋಗ ಹುಡುಕುತ್ತಿರುವ ವಿದ್ಯಾರ್ಥಿಗಳು ಹಾಗೂ ಯುವಕ, ಯುವತಿಯರಿಗೆ ಸಂದರ್ಶನಕ್ಕೆ ಸಿದ್ಧರಾಗಲು ಸಲಹೆ, ಮಾರ್ಗದರ್ಶನ ನೀಡುವುದಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಬಯೋಡಾಟಾ ತಯಾರಿಸುವುದು, ಉದ್ಯೋಗದ ಜವಾಬ್ದಾರಿ ತಿಳಿದುಕೊಳ್ಳುವುದು ಹಾಗೂ ಸಂದರ್ಶನ ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ ಎಂದರು.
ನೋಂದಣಿ ಹಾಗೂ ಭಾಗವಹಿಸುವಿಕೆ ಸಂಪೂರ್ಣ ಉಚಿತ. ಪಿಯುಸಿ, ಐಟಿಐ, ಡಿಪ್ಲೊಮಾ, ಪದವಿ ಮತ್ತು ಸ್ನಾತಕೋತ್ತರ ಪದವಿ ಪಾಸಾದ ಅಭ್ಯರ್ಥಿಗಳು ಭಾಗವಹಿಸಬಹುದು. ಉದ್ಯೋಗ ಮೇಳಕ್ಕೆ ಬರುವಾಗ ಬಯೋಡಾಟಾ ಪ್ರತಿ, ಗುರುತಿನ ಚೀಟಿ, ಅಂಕಪಟ್ಟಿ ಹಾಗೂ ಭಾವಚಿತ್ರ ತರಬೇಕು. ಪ್ರಚಾರ ಪತ್ರದಲ್ಲಿರುವ ಕ್ಯೂಆರ್ ಕೋಡ್ ಸ್ಕಾನ್ ಮಾಡಬಹುದು. ಉದ್ಯೋಗ ಮೇಳದ ನಂತರವೂ ಅಭ್ಯರ್ಥಿಗಳಿಗೆ ನೆರವಾಗಲು ಡಿ.1ರಿಂದ 7ರವರೆಗೆ ನಿತ್ಯ ಸಂಜೆ 4ರಿಂದ 7ರವರೆಗೆ ಕೆಕೆಸಿಸಿಐ ಕಟ್ಟಡದ ಎರಡನೇ ಮಹಡಿಯಲ್ಲಿ ಮುಂದಿನ ಹಂತದ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಅನುಷ್ಠಾನ ಸಹಭಾಗಿ ಆಯುಧ್ ಜಾಬ್ಸ್ನ ಸದಾನಂದ ಪಟ್ಟಣಶೆಟ್ಟಿ, ಕೆಕೆಸಿಸಿಐ ಉದ್ಯೋಗ ಮೇಳದ ಸಂಚಾಲಕ ಅನುದೀಪ ದಂಡೋತಿ, ಪ್ರಮುಖರಾದ ಸತೀಶ, ಅಯ ಅಸ್ಪಳ್ಳಿ, ಆನಂದ ಹೋಳಕುಂದೆ, ಜಗದೀಶ ಗಜರೆ, ಸಿದ್ದಲಿಂಗ ಶೆಳ್ಳಗಿ, ದಿನೇಶ ಪಾಟೀಲ್, ಅಭಿಜೀತ್ ಪಡಶೆಟ್ಟಿ, ಸಂತೋಷ ನಂದ್ಯಾಳ ಇತರರಿದ್ದರು.
ನ.22ರವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಒಟ್ಟು ಆರು ಪೂರ್ವ ಮಾರ್ಗದರ್ಶನ ಅವಧಿ ನಡೆಯಲಿವೆ. ಆಸಕ್ತ ಉದ್ಯೋಗಾಕಾಂಗಳು ಹೆಸರು ನೋಂದಾಯಿಸಿಕೊಂಡು ಪ್ರಯೋಜನ ಪಡೆದುಕೊಳ್ಳಬೇಕು. ನ.30ರಂದು ಬೆಳಗ್ಗೆ 9ರಿಂದ ಎಂಆರ್ಎಂಸಿ ಸ್ಯಾಕ್ ಕಟ್ಟಡದಲ್ಲಿ ಉದ್ಯೋಗ ಸೇತು ಉದ್ಯೋಗ ಮೇಳ ನಡೆಯಲಿದೆ.> ಶರಣಬಸಪ್ಪ ಪಪ್ಪಾ, ಅಧ್ಯಕ್ಷ, ಕೆಕೆಸಿಸಿಐ