ಕಲಬುರಗಿ

ಜೇವರ್ಗಿ: ಅನ್ಯಕೋಮಿನ ಯುವಕನಿಂದ ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ

ಕಲಬುರಗಿ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಪುಸಲಾಯಿಸಿ, ಮದುವೆಯಾಗುವುದಾಗಿ ಹೇಳಿ ಅನ್ಯಕೋಮಿನ ಯುವಕನೊಬ್ಬ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಜೇವರ್ಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪದ ಮೇಲೆ ಇಸ್ಮಾಯಿಲ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಕಳೆದ ಯುಗಾದಿ ಹಬ್ಬದ ವೇಳೆ ಬಾಲಕಿಗೆ ಇಸ್ಮಾಯಿಲ್ ಪರಿಚಯವಾಗಿದ್ದ. ಬಳಿಕ ಆಕೆ ಹಿಂದೆ ಬಿದ್ದು ಪ್ರೀತಿಸುವಂತೆ ಹಾಗೂ ಮದುವೆಯಾಗುವುದಾಗಿ ನಿರಂತರವಾಗಿ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಬಾಲಕಿ ತಾನು ಮದುವೆಯಾಗುವ ವಯಸ್ಸಿಗೆ ಬಂದಿಲ್ಲ ಎಂದು ತಿಳಿಸಿ ಆತನ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಳು ಎನ್ನಲಾಗಿದೆ.

ಆದರೂ, ಆರೋಪಿ ಆಕೆಯನ್ನು ಬಿಡದೆ, ಬಾಲಕಿ ತನ್ನ ಸಂಬಂಧಿಕರ ಊರಿಗೆ ಬಂದಾಗಲೆಲ್ಲ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವಿಚಾರ ಕುಟುಂಬದವರ ಗಮನಕ್ಕೂ ಬಂದಿದ್ದು, ಹಿರಿಯರ ಸಮ್ಮುಖದಲ್ಲಿ ಆರೋಪಿಯೊಂದಿಗೆ ಈ ಕುರಿತು ಮಾತುಕತೆ ಹಾಗೂ ಜಗಳ ನಡೆದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಕಳೆದ ಅಕ್ಟೋಬರ್ 29ರಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಗಮನಿಸಿ ಆರೋಪಿ ಬಾಲಕಿಯನ್ನು ಅಪಹರಿಸಿಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಜೇವರ್ಗಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.