ಸುಲೇಪೇಟದಲ್ಲಿ ಹಮ್ಮಕೊಂಡಿದ್ದ ಹೋರಾಟದಲ್ಲಿ ನಿಡಗುಂದಾದ ಶ್ರೀ ಕರುಣೇಶ್ವರ ಶಿವಾಚಾರ್ಯರು ಮಾತನಾಡಿದರು. ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯ, ಹಣಮಂತರಾವ ಪೊಲೀಸ್​ ಪಾಟೀಲ್​, ಶಿವರಾಜ ಪಾಟೀಲ್​, ಶಿವಕುಮಾರ ಸುಲೇಪೇಟ ಇತರರಿದ್ದರು. 
ಕಲಬುರಗಿ

ಟನ್​ ಕಬ್ಬಿಗೆ 5,500 ರೂ. ನೀಡಿ

ಚಿಂಚೋಳಿ: ಟನ್​ ಕಬ್ಬಿಗೆ 5,500 ರೂ. ಬೆಂಬಲ ಬೆಲೆ ನೀಡಬೇಕು ಹಾಗೂ ಸಿದ್ಧಸಿರಿ ಎಥೆನಾಲ್​ ಕಂಪನಿಯು ರೈತರಿಂದ ಕಬ್ಬು ಖರೀದಿಸುವಂತೆ ಆದೇಶಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂ, ರೈತ ಸೇನೆ ನೇತೃತ್ವದಲ್ಲಿ ಸುಲೇಪೇಟದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಂದ್​ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು.

ರೈತರು ಸಂಪೂರ್ಣ ಸುಲೇಪೇಟ ಬಂದ್​ಗೆ ಕರೆ ನೀಡಿ ಬಸವೇಶ್ವರ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು. ವ್ಯಾಪಾರಸ್ಥರು ಅಂಗಡಿ-ಮುಂಗಟ್ಟುಗಳು ಹಾಗೂ ವ್ಯಾಪಾರ ವಹಿವಾಟುಗಳನ್ನು ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ನಿಡಗುಂದಾದ ಶ್ರೀ ಕರುಣೇಶ್ವರ ಶಿವಾಚಾರ್ಯರು ಮಾತನಾಡಿ, ಕಬ್ಬು ಬೆಳೆಗೆ ಸೂಕ್ತ ಬೆಲೆ ಸಿಗದಿದ್ದರೆ ರೈತರ ಬದುಕು ಬೀದಿಗೆ ಬೀಳಲಿದೆ. ರೈತರ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರಗಳು ತಣ ಸ್ಪಂದಿಸಬೇಕು. ಅನ್ನದಾತರ ಸಂಕಷ್ಟ ನಿವಾರಿಸಲು ಕಾರ್ಖಾನೆಗಳು ಮತ್ತು ಆಡಳಿತ ಯಂತ್ರ ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ವೀರಣ್ಣ ಗಂಗಾಣಿ, ಗೋಪಾಲ ಎಂ.ಪಿ., ರಾಯಪ್ಪಗೌಡ ಬೆನಕನಳ್ಳಿ, ಮಾರುತಿ ಗಂಜಗೇರಾ, ಕಾಶಿರಾಮ ತಳವಾರ, ಶರಣಪ್ಪ ಸೊಂತ, ಮಲ್ಲಿಕಾರ್ಜುನ ದೇಸಾಯಿ, ಆರ್​.ಆರ್​.ಪಾಟೀಲ್​ ಮಾತನಾಡಿದರು.

ಪ್ರತಿಟನ್​ ಕಬ್ಬಿಗೆ 5,500 ರೂ. ಬೆಂಬಲ ಬೆಲೆ ನಿಗದಿಪಡಿಸಬೇಕು. ರೈತರ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಸರ್ಕಾರ ಎಫ್​ಆರ್​ಪಿ (ನ್ಯಾಯಯುತ ಮತ್ತು ಲಾಭದಾಯಕ ಬೆಲೆ) ಹೆಚ್ಚಿಸಬೇಕು. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (ಎಂಎಸ್​ಪಿ) ಹಾಗೂ ಎಥೆನಾಲ್​ ದರವನ್ನು ಹೆಚ್ಚಿಸಬೇಕು. ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚದ ಹೆಸರಿನಲ್ಲಿ ರೈತರಿಗೆ ಪಾವತಿಸಬೇಕಾದ ಹಣದಲ್ಲಿ ಅನ್ಯಾಯದ ಕಡಿತ ಮಾಡಬಾರದು. ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಕಬ್ಬಿನ ಬಾಕಿ ಹಣವನ್ನು ನಿಗದಿತ ಸಮಯದಲ್ಲಿ ಪಾವತಿಸಬೇಕು ಎಂದು ಆಗ್ರಹಿಸಿದರು.

ಸುಲೇಪೇಟದ ಶ್ರೀ ಪ್ರಭು ದೇವರು, ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯರು, ಶ್ರೀ ಶರಣ ಶಂಕರಲಿಂಗ ಮಹಾರಾಜರು, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಸಿದ್ದಯ್ಯ ಸ್ವಾಮಿ, ಹಣಮಂತರಾವ ಪೊಲೀಸ್​ ಪಾಟೀಲ್​, ಶಿವರಾಜ ಪಾಟೀಲ್​, ಶಿವಕುಮಾರ ಸುಲೇಪೇಟ, ಚಾಂದ್​ಪಾಶ ಮೋಮಿನ್​, ಸೋಮಶೇಖರ ತಾರಪುರ, ರಮೇಶ ದೇಸಾಯಿ, ಮಲ್ಲಿಕಾರ್ಜುನ ಕೊಡದೂರ, ಶರಣು ಸೊಂತ, ವೀರೇಶ ದೇಸಾಯಿ, ರೇವಣಸಿದ್ದಪ್ಪ ಅಣಕಲ್​, ರಾಜಕುಮಾರ ತಳವಾರ, ರಜಾಕ್​ ಪಟೇಲ್​, ಚೇತನ್​ ಅಣವಾರ, ಪ್ರೇಮಕುಮಾರ ಸುಂಠಾಣ, ಶ್ರೀಕಾಂತ ಸುಂಠಾಣ, ವಿಕಾಸ ಸುಂಠಾಣ, ಮಹಾಂತೇಶ ಕಲ್ಯಾಣಿ, ಶರಣಬಸಪ್ಪ ಕಲ್ಯಾಣಿ ಇತರರಿದ್ದರು.

ಸಂಚಾರ ಅಸ್ತವ್ಯಸ್ತ

ಬೆಳಗ್ಗೆ 7ಗಂಟೆಯಿಂದಲೇ ಸುಲೇಪೇಟದಲ್ಲಿ ರಸ್ತೆ ಸಂಚಾರ ಸಂಪೂರ್ಣ ಬಂದ್​ ಮಾಡಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೊಸಳ್ಳಿ, ಚಿಮ್ಮಾಇದಲಾಯಿ, ನಿಡಗುಂದಾ ಹಾಗೂ ಯಲಕಪಳ್ಳಿ ಬಳಿ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಿದರು. ಇದರಿಂದ ದೂರದ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಹಾಗೂ ಶಾಲಾ&ಕಾಲೇಜು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸಿದರು.

ಮೂರು ದಿನ ಕಾಲಾವಕಾಶ, ಹೋರಾಟ ವಾಪಸ್​

ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದರು. ಇದರಿಂದಾಗಿ ಬೆಳಗ್ಗೆಯಿಂದ ಸಂಜೆವರೆಗೂ ಧರಣಿ ನಡೆಯಿತು. ಸಂಜೆ ಸಹಾಯಕ ಆಯುಕ್ತ ಪ್ರಭುರೆಡ್ಡಿ ಹಾಗೂ ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ ಅವರು ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಮೂರು ದಿನಗಳೊಳಗೆ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಹಿನ್ನೆಲೆ ಹೋರಾಟ ತಾತ್ಕಾಲಿಕವಾಗಿ ಹಿಂಪಡೆದರು