ಕಲಬುರಗಿ: ಈ ಭಾಗದಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ ಸೂಕ್ತ ವೇದಿಕೆ ಸಿಕ್ಕಿರಲಿಲ್ಲ. ಇದೀಗ ಅವಕಾಶ ಕಲ್ಪಿಸುವ ಮೂಲಕ ಕಲಬುರಗಿಯಲ್ಲಿ ಕ್ರೀಡಾ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನೆಕ್ಸ್ ಫೌಂಡೇಷನ್ ಪ್ರಾಯೋಜಕತ್ವದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸೆನ್ಜೋ ಸಂಸ್ಥೆ ಶನಿವಾರ ಆಯೋಜಿಸಿದ್ದ ಕಲಬುರಗಿ ಕ್ರೀಡಾ ಹಬ್ಬ ಸಮಾರೋಪ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತ ಕ್ರೀಡಾಪಟು ಮತ್ತು ತಂಡಗಳಿಗೆ ಪದಕ ಮತ್ತು ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಕ್ರೀಡಾಪಟುಗಳಿಗಾಗಿ ಆಯೋಜಿಸಿದ್ದ ಕಲಬುರಗಿ ಸ್ಪೋರ್ಟ್ಸ್ ಹಬ್ಬ ಯಶಸ್ವಿಯಾಗಿ ಮುಗಿದಿದೆ. ವೃತ್ತಿಪರರು ಮತ್ತು ಸ್ಥಳಿಯ ಕ್ರೀಡಾ ಅಸೋಸಿಯೇಷನ್ ಸಹಯೋಗದಿಂದ ನಡೆದ ಈ ಹಬ್ಬದಲ್ಲಿ ಭಾಗವಹಿಸಿದವರು ಪ್ರಶಸ್ತಿ ಮಾತ್ರ ಪಡೆದಿಲ್ಲ, ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸುವುದರೊಂದಿಗೆ ಆತ್ಮಸ್ಥೆರ್ಯವನ್ನೂ ಹೆಚ್ಚಿಸಿಕೊಂಡಿದ್ದಾರೆ ಎಂದರು.
ಇಂದಿನ ಕ್ರೀಡಾ ಹಬ್ಬ ಮುಕ್ತಾಯದ ಗೆರೆಯಲ್ಲ, ಇದು ಕ್ರೀಡಾ ಬೆಳವಣಿಗೆ ಆರಂಭ. ಪ್ರಶಸ್ತಿ ಪಡೆದ ಎಲ್ಲ ಕ್ರೀಡಾಪಟುಗಳಿಗೆ ಅಭಿನಂದನೆಗಳು. ಪ್ರತಿಭೆಗಳಿಗೆ ನಿರಂತರ ಪ್ರೋತ್ಸಾಹಿಸುವ ಮೂಲಕ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತೆ ಬೆಂಬಲಿಸಲಾಗುವುದು ಎಂದು ಹೇಳಿದರು.
50 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದ ನವೀಕರಣ ಕಾರ್ಯ ನಡೆದಿದೆ. ಜತೆಗೆ ಕೆಕೆಆರ್ಡಿಬಿ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ವೆಚ್ಚದಲ್ಲಿ ನಗರದ ಐದು ಕಡೆ ಸಮುದಾಯ ಕ್ರೀಡಾ ಸಂಕೀರ್ಣ ನಿರ್ಮಿಸಲಾಗುತ್ತಿದೆ. ಫುಟ್ಬಾಲ್ ಕ್ರೀಡಾಂಗಣ ನಿರ್ಮಿಸಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಕ್ರೀಡಾಂಗಣ ಕಾಮಗಾರಿ ಪ್ರಗತಿಯಲ್ಲಿದೆ. ಚಿತ್ತಾಪುರದಲ್ಲೂ ಹೊಸ ಕ್ರೀಡಾಂಗಣ ನಿರ್ಮಿಸಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಕ್ರೀಡಾ ಅಸೋಸಿಯೇಷನ್ಗಳ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಎಂಎಲ್ಸಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಜಿಲ್ಲೆಯ ಕ್ರೀಡಾಪಟುಗಳಲ್ಲಿ ಕ್ರೀಡಾಸಕ್ತಿ ಹೆಚ್ಚಿಸಲು ಈ ಹಬ್ಬ ಸಹಕಾರಿಯಾಗಿದೆ. ಹಿಂದೆ ಇಂಥ ಕ್ರೀಡಾ ಹಬ್ಬ ಜಿಲ್ಲೆಯಲ್ಲಿ ಅಗಿರಲಿಲ್ಲ. ಯುವಜನರ ಭವಿಷ್ಯದ ದೃಷ್ಟಿಯಿಂದ ಕ್ರೀಡೆ ಆಯೋಜಿಸಿದ್ದು ಸಾರ್ಥಕ ಎನಿಸಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗೆ ಸಚಿವ ಪ್ರಿಯಾಂಕ್ ರ್ಖಗೆ ಕೊಡುಗೆ ಅಪಾರ. 30 ಕೋಟಿ ಮೊತ್ತದಲ್ಲಿ ಮಹಿಳಾ ಕ್ರೀಡಾಂಗಣ ಕಾರ್ಯ ಅಂತಿಮ ಹಂತದಲ್ಲಿದೆ. ಸಚಿವ ಪ್ರಿಯಾಂಕ್ ಉತ್ತೇಜನದಿಂದ ಕಲಬುರಗಿ ರೊಟ್ಟಿ ಕುರಿತು ಇಂದು ಪ್ರಧಾನಮಂತ್ರಿಗಳು ಮನ್ ಕೀ ಬಾತ್ನಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.
ಶಾಸಕರಾದ ಕನೀಜ್ ಫಾತಿಮಾ, ಎಂ.ವೈ. ಪಾಟೀಲ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಜೆಸ್ಕಾಂ ಅಧ್ಯ ಪ್ರವಿಣ ಪಾಟೀಲ್ ಹರವಾಳ, ಕುಡಾ ಅಧ್ಯ ಮಜಹರ್ ಆಲಂಖಾನ್, ಮೇಯರ್ ಅಜ್ಮಲ್ ಗೋಲಾ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯೆ ಚಂದ್ರಿಕಾ ಪರಮೇಶ್ವರ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ. ಶರಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಶಾಲೂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರ, ಪಾಲಿಕೆ ಆಯುಕ್ತ ಪಿ. ಶ್ರವಣಕುಮಾರ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಾಂಗ್ರೆಸ್ ಜಿಲ್ಲಾಧ್ಯ ಡಾ.ಕಿರಣ ದೇಶಮುಖ, ಜಿಪಂ ಮಾಜಿ ಸದಸ್ಯ ರಾಜೇಶ ಗುತ್ತೇದಾರ್ ಇತರರಿದ್ದರು. ಕಲಬುರಗಿ ಸ್ಪೋರ್ಟ್ಸ್ ಹಬ್ಬ ನೋಡಲ್ ಅಧಿಕಾರಿ ಸಂಗಮೇಶ ವಂದಿಸಿದರು.
ಮುಂದಿನ ದಿನಗಳಲ್ಲಿ ಪ್ರತಿವರ್ಷ ಒಂದು ತಿಂಗಳು ಕ್ರೀಡಾ ಹಬ್ಬಕ್ಕೆ ಮೀಸಲಿಡುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಇದರಿಂದ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಅಗತ್ಯ ತರಬೇತಿ ಪಡೆಯಲು ಅನುಕೂಲವಾಗಲಿದೆ.> ಪ್ರಿಯಾಂಕ್ ಖರ್ಗೆ ಗೃಹ ಸಚಿವ
ಎರಡು ಸಾವಿರ ಜನರನ್ನು ಸೇರಿಸಿ ಆಟೋಟಗಳನ್ನು ಆಡಿಸುವ ಮಹತ್ವದ ಕೆಲಸವಾಗಿದೆ. ತಕ್ಕ ಉತ್ತರ ನೀಡುವ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ಬಾಯಿಯನ್ನು ಸಚಿವ ಪ್ರಿಯಾಂಕ್ ರ್ಖಗೆ ಬಂದ್ ಮಾಡಿದ್ದಾರೆ. ಐಟಿ&ಬಿಟಿ ಕ್ಷೇತ್ರದಲ್ಲಿ ವಿಶ್ವದಲ್ಲಿ 9ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಪ್ರಿಯಾಂಕ್ ವಿಶ್ವನಾಯಕರಾಗುತ್ತ ಹೆಜ್ಜೆ ಇಟ್ಟಿದ್ದಾರೆ. ಅವರ ಕಾರ್ಯವೈಖರಿ ಮಾದರಿಯಾಗಿದೆ.> ತಿಪ್ಪಣ್ಣಪ್ಪ ಕಮಕನೂರ ಎಂಎಲ್ಸಿ