lokayukth trap 
ಕಲಬುರಗಿ

ನಿವೃತ್ತ ಪಿಡಬ್ಲ್ಯುಡಿ ಇಂಜಿನಿಯರ್ ಲಾಕರ್‌ನಲ್ಲಿ 9 ಲಕ್ಷ ರೂ. ಮೌಲ್ಯದ ಅಮಾನ್ಯ ನೋಟು ಪತ್ತೆ

ಕಲಬುರಗಿ: ಆದಾಯಕ್ಕೆ ಮೀರಿ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ನಿವೃತ್ತ ಪಿಡಬ್ಲ್ಯುಡಿ ಇಂಜಿನಿಯರ್ ಮಾಣಿಕ್ ಕನಕಟ್ಟಿ ಅವರ ನಿವಾಸ ಹಾಗೂ ಸಂಬಂಧಿತ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಬ್ಯಾಂಕ್ ಲಾಕರ್‌ನಲ್ಲಿ ಅಮಾನ್ಯಗೊಂಡ ₹1,000 ಮುಖಬೆಲೆಯ ಸುಮಾರು ₹9 ಲಕ್ಷ ಮೌಲ್ಯದ ನೋಟುಗಳು ಹಾಗೂ 20 ತೊಲೆಗೂ ಅಧಿಕ ಚಿನ್ನಾಭರಣಗಳು ಪತ್ತೆಯಾಗಿವೆ.
ಲೋಕಾಯುಕ್ತ ಕಲಬುರಗಿ ಪೊಲೀಸ್ ಅಧೀಕ್ಷಕ ಸಿದ್ಧರಾಜು ಸಿ. ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅಧಿಕಾರಿಗಳು ಮಂಗಳವಾರ ಗೊದುತಾಯಿ ನಗರದ ನಿವಾಸ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದರು. ಬುಧವಾರ ನಗರದ ಎನ್.ವಿ. ಕಾಲೇಜು ಸಮೀಪದ ಎಸ್‌ಬಿಐ ಬ್ಯಾಂಕ್‌ನಲ್ಲಿರುವ ಲಾಕರ್ ಪರಿಶೀಲನೆ ವೇಳೆ ಈ ಆಸ್ತಿ ಪತ್ತೆಯಾಗಿದೆ.
ಲಾಕರ್‌ನಲ್ಲಿ ಅಮಾನ್ಯಗೊಂಡ ₹1,000 ಮುಖಬೆಲೆಯ ನೂರಾರು ನೋಟುಗಳು ಹಾಗೂ ಉಂಗುರ ಸೇರಿ ವಿವಿಧ ಚಿನ್ನಾಭರಣಗಳು ದೊರೆತಿದ್ದು, ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಬಸವರಾಜ, ಪೊಲೀಸ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ರಾಜಶೇಖರ ಬಡದೇಸಾರ ಹಾಗೂ ಇತರ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.