nehru statue controversy 
ಕಲಬುರಗಿ

ಕಲಬುರಗಿ ಕೃಷಿ ಮಾರುಕಟ್ಟೆಯಲ್ಲಿ ನೆಹರು ಮೂರ್ತಿ ಪ್ರತಿಷ್ಠಾಪನೆಗೆ ಆಕ್ಷೇಪ

ಪ್ರಮುಖ ಮುಖ್ಯಾಂಶಗಳು

  • ಎಪಿಎಂಸಿ ವರ್ತಕರಿಂದ ಆಕ್ರೋಶ
  • ಬಂದ್​ ಮಾಡಿ ಪ್ರತಿಭಟನೆ
ಕಲಬುರಗಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಮುಖ್ಯ ಪ್ರಾಂಗಣದಲ್ಲಿ ನೆಲಸಮಗೊಳಿಸಿರುವ ಹಳೇ ಆಡಳಿತ ಕಚೇರಿ ಸ್ಥಳದಲ್ಲಿ ಹೊಸ ಗಣಕೀಕೃತ ಟೆಂಡರ್​ ಹಾಲ್​ ಹಾಗೂ ಸಮಿತಿ ಆಡಳಿತ ಕಚೇರಿಯನ್ನು ನಿರ್ಮಿಸಬೇಕು, ಆ ಸ್ಥಳದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್​ ನೆಹರು ಅವರ ಪ್ರತಿಮೆ ಸ್ಥಾಪಿಸಬಾರದು ಎಂದು ಆಗ್ರಹಿಸಿ ಗಂಜ್​ ವರ್ತಕರು ವ್ಯಾಪಾರ ಸ್ಥಗಿತಗೊಳಿಸಿ, ಪ್ರತಿಭಟನೆ ನಡೆಸಲಾಯಿತು.
ಗಂಜ್​ನ ಹನುಮಾನ ದೇವಸ್ಥಾನದಲ್ಲಿ ಸಭೆ ಸೇರಿದ ವರ್ತಕರು, ಎಪಿಎಂಸಿ ತಾತ್ಕಾಲಿಕ ಕಚೇರಿವರೆಗೆ ಆಹಾರ ಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂಘದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಆಡಳಿತದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಕೃಷಿ ಮಾರಾಟ ಮಂಡಳಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ನೆಲಸಮಗೊಳಿಸಿದ ಸ್ಥಳವೂ ಎಪಿಎಂಸಿಯ ಕೇಂದ್ರ ಸ್ಥಳದಲ್ಲಿ ಇದೆ. ಆದರೆ ಸರ್ಕಾರ, ಸ್ಥಳಿಯ ಆಡಳಿತವೂ ದಿಢೀರ್​ ಎಂದು ನಿರ್ಧರಿಸಿ, ನೆಹರು ಪ್ರತಿಮೆ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ, ಪ್ರತಿಮೆ ಸ್ಥಾಪಿಸಬಾರದು ಎಂದು ಕೋರ್ಟ್​ ಆದೇಶವಿದ್ದರೂ ಧಿಕ್ಕರಿಸಿರುವುದು ನ್ಯಾಯಾಂಗ ನಿಂದನೆ ಆಗುತ್ತದೆ. ಮೂರ್ತಿಯಿಂದ ಎಪಿಎಂಸಿ ಆವರಣದಲ್ಲಿ ರಾಜಕೀಯ ಕಲಹ ಸೃಷ್ಟಿಯಾಗುತ್ತವೆ. ನಿಯಮ ಉಲ್ಲಂಘಿಸಿ ಪ್ರತಿಮೆ ನಿರ್ಮಾಣಕ್ಕೆ ಮುಂದಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ರೈತರು ಮತ್ತು ವ್ಯಾಪಾರಿಗಳ ಜೀವನಾಡಿಯಾದ ಎಪಿಎಂಸಿ ಆಡಳಿತ ಕಚೇರಿಯನ್ನು ಸ್ಥಳಾಂತರಿಸಿದರೆ ಸಹಸ್ರಾರು ರೈತರಿಗೆ, ಇಡೀ ವರ್ತಕ ಸಮೂಹಕ್ಕೆ ಅನ್ಯಾಯವಾಗುತ್ತದೆ. ಪ್ರಸ್ತುತ ಎಪಿಎಂಸಿ ಕಚೇರಿಯ ಸ್ಥಳವೂ ಕೇಂದ್ರ ಭಾಗದಲ್ಲಿ ಇದ್ದು, ಇಲ್ಲಿ ಹೊಸ ಟೆಂಡರ್​ ಹಾಲ್​ ನಿರ್ಮಿಸುವುದು ಸೂಕ್ತ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸಂದ ಅಧ್ಯಕ್ಷ ಸಂತೋಷ ಲಂಗರ, ಗೌರವ ಕಾರ್ಯದರ್ಶಿ ಬಸವರಾಜ ಎಚ್​. ತಡಕಲ್​, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್​.ಪಾಟೀಲ್​ ನರಿಬೋಳ, ಗಂಜ್​ ಅಸೋಸಿಯೇಷನ್​ ಮಾಜಿ ಅಧ್ಯಕ್ಷ ಶ್ರೀಮಂತ ಉದನೂರ, ಶರಣಪ್ಪ ಬಾಳಿ, ಚಂದ್ರಶೇಖರ ಬಿಜಾಪುರ, ಶಶಿಕಾಂತ ಪಾಟೀಲ್​ ಚಿತ್ತಾಪುರ, ಮಹೇಶ ಪಾಟೀಲ್​ ಕೂಡಿ, ಸಂಗನಬಸಪ್ಪ ಹಿರೇಗೌಡ, ಸಿದ್ದಲಿಂಗ ಕೊಪ್ಪಿ, ಸಂಜುಕುಮಾರ ಮುಗಳಿ, ವಿಜಯಕುಮಾರ ಬಿರಾದಾರ, ಸಂತೋಷಕುಮಾರ್​ ನಿಂಗದೆ, ಬಸವರಾಜ ಪ್ಯಾಟಿ, ಸಂತೋಷಕುಮಾರ ಬಾಳಿ, ಭೀಮಶಾ ಜೀವಣಗಿ, ಚಂದ್ರಕಾಂತ, ಕಲ್ಯಾಣಪ್ಪ ನಂದಿಕೂರ, ರವೀಂದ್ರ ಸುಲೇಪೇಟ್​, ಮಲ್ಲಿಕಾರ್ಜುನ ಹೊಸಗೌಡ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಲಕ್ಷಿ$್ಮಕಾಂತ ಸ್ವಾದಿ, ರಾಮಸೇನೆ ಜಿಲ್ಲಾಧ್ಯಕ್ಷ ಮಹೇಶ ಕೆಂಭಾವಿ, ಬಹುಜನ ಪಾರ್ಟಿ ರಾಜ್ಯ ಕಾರ್ಯದರ್ಶಿ ಹುಚ್ಛೇಶ್ವರ ವಠಾರ ಇತರರಿದ್ದರು.