ಗುಲ್ಬರ್ಗ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಎನ್​ಎಸ್​ಎಸ್​ ವಿಶೇಷ ಶಿಬಿರ ಸಮಾರೋಪದಲ್ಲಿ ಡಾ.ಎಚ್​.ಎಸ್​.ಜಂಗೆ, ಡಾ.ಅವಿನಾಶ ಕಂಟಿಕರ್​, ಡಾ.ವಿದ್ಯಾಸಾಗರ, ವಸಂತ ರಾಠೋಡ್​ ಇತರರಿದ್ದರು. 
ಕಲಬುರಗಿ

ಸರ್ವತೋಮುಖ ಅಭಿವೃದ್ಧಿಗೆ ಎನ್​ಎಸ್​ಎಸ್​ ಪೂರಕ

ಕಲಬುರಗಿ: ಯುವಕರು ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಸಕ್ರಿಯ ತೊಡಗಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಪ್ರೋತ್ಸಾಹದಾಯಕವಾಗಿವೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶಶಿಕಾಂತ ಎಸ್​.ಉಡಿಕೇರಿ ಹೇಳಿದರು.

ವಿವಿ ರಾಷ್ಟ್ರೀಯ ಸೇವಾ ಯೋಜನೆ ಕೋಶದಿಂದ ಜ್ಞಾನಗಂಗಾ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರ್​ ಮಹಾವಿದ್ಯಾಲಯಗಳ ಎನ್​ಎಸ್​ಎಸ್​ ವಿಶೇಷ ಶಿಬಿರ ಸಮಾರೋಪದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಾಯಕತ್ವ, ನಿಸ್ವಾರ್ಥ ಸೇವೆ ಮತ್ತು ಆಸಕ್ತಿಯಿಂದ ಭಾಗವಹಿಸುವುದರೊಂದಿಗೆ ಉನ್ನತ ಸಾಧನೆ ಸಾಧ್ಯ ಎಂದರು.

ಕಠಿಣ ಪರಿಸ್ಥಿತಿ ಎದುರಿಸುವ ಸಾಮರ್ಥ್ಯ, ಸಕಾರಾತ್ಮಕ ಮನೋಭಾವ, ಆತ್ಮಸ್ಥೆರ್ಯ ಮತ್ತು ಸಮೂಹಿಕ ಶಕ್ತಿ ಎನ್ನೆಸ್ಸೆಸ್​ ಬೆಳೆಸುತ್ತದೆ. ಸಕ್ರಿಯ ಭಾಗವಹಿಸುವಿಕೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಮೂಲಕ ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬಹುದು ಎಂದು ಹೇಳಿದರು.

ಎನ್​ಎಸ್​ಎಸ್​ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಚ್​.ಎಸ್​. ಜಂಗೆ ಮಾತನಾಡಿ, ಸಾರ್ವಜನಿಕ ಸೇವೆ ಮೂಲಕ ಅಭಿವೃದ್ಧಿ ಮಾಡಲು ವಿದ್ಯಾರ್ಥಿಗಳು ಮೌಲಿಕ ಅನುಭವ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುಲಸಚಿವ ಮೊಹಮ್ಮದ್​ ಶಕೀಲ್​, ಮೌಲ್ಯಮಾಪನ ಕುಲಸಚಿವೆ ಪ್ರೊ.ಅಶ್ವಿನಿ, ವಿತ್ತಾಧಿಕಾರಿ ಜಯಾಂಬಿಕ, ಡಾ.ಅವಿನಾಶ ಕಂಟಿಕರ್​, ಡಾ.ವಿದ್ಯಾಸಾಗರ, ವಸಂತ ರಾಠೋಡ್​ ಇತರರಿದ್ದರು. ಶಿಬಿರಾರ್ಥಿಗಳಾದ ಪ್ರಕಾಶ್​ ಎಸ್​., ಮೇಘಾ ಪಾಟೀಲ್​ ಅನಿಸಿಕೆ ಹಂಚಿಕೊಂಡರು. ಐಶ್ವರ್ಯ ಸ್ವಾಗತಿಸಿದರು. ಸೌಂದರ್ಯ, ಭಾಗ್ಯ ವಂದಿಸಿದರು.