- ಎಂಎಲ್ಸಿ ಸಿ.ಟಿ.ರವಿ ಹೇಳಿಕೆ >
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾರತದ ಆಡಳಿತಕ್ಕೆ ದೇಶದ ಜನರೆಲ್ಲರೂ ರಕ್ಷಾಕವಚವಾಗಿ ನಿಲ್ಲಬೇಕಿದೆ. ನಾವು ಮೋದಿಯವರಿಗೆ ರಕ್ಷಣೆಯಾದರೆ, ಇಡೀ ದೇಶಕ್ಕೆ ರಕ್ಷಾ ಕವಚವಾಗಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಕೆಕೆಸಿಸಿಐ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡ ಮೋದಿ ಸರ್ಕಾರದ 12 ವರ್ಷ ವಿಕಸಿತ ಭಾರತ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಮೋದಿ ಸರ್ಕಾರದ ಸಾಧನೆ ಅರ್ಥವಾಗಬೇಕಾದರೆ ಹಿಂದಿನ ಯುಪಿಎ ಆಡಳಿತವನ್ನು ಅವಲೋಕಿಸಬೇಕು ಎಂದರು.
ಅಂದು 2ಜಿ, ಕೋಲ್ಜಿ ಹಾಗೂ ಕಾಮನ್ವೆಲ್ತ್ನಂತಹ ಬೃಹತ್ ಹಗರಣಗಳೇ ನೆನಪಾಗುತ್ತಿದ್ದವು. 12 ವರ್ಷದಲ್ಲಿ ಮೋದಿ ಸರ್ಕಾರ ಒಂದೇ ಒಂದು ಹಗರಣವಿಲ್ಲದೇ ಬಡವರಿಗೆ ಯೋಜನೆ ನೀಡುತ್ತಿದೆ. ಮಾತೆತ್ತಿದರೆ ಅದಾನಿ, ಅಂಬಾನಿ ಎಂದು ಟೀಕಿಸುವ ಕಾಂಗ್ರೆಸ್ಸಿಗರು, ಬೆಂಗಳೂರಿನ ಟನಲ್ ರೋಡ್ ಕಾಮಗಾರಿಗೆ ಅದಾನಿ ಸಮೂಹದ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದರು.
ಮಾಜಿ ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸದಾ ಸ್ಪಂದಿಸಿದೆ. ಜಿಲ್ಲೆಯಲ್ಲಿ 1021 ಕೋಟಿ ರೂ. ವೆಚ್ಚದ 71 ಕಿ.ಮೀ ಉದ್ದದ ಭಾರತಮಾಲಾ ರಸ್ತೆ ನಿರ್ಮಿಸಲಾಗುತ್ತಿದೆ. ಮೆಗಾ ಟೆಕ್ಸ್ಟೈಲ್ ಪಾರ್ಕ್ ಜಿಲ್ಲೆಗೆ ಮಂಜೂರಾಗಿದೆ. ವಂದೇ ಭಾರತ್ ಸೌಲಭ್ಯ ದೊರಕಿದೆ. ಜಲ್ ಜೀವನ ಮಿಷನ್ ಯೋಜನೆ ಅಡಿ ನೂರಾರು ಹಳ್ಳಿ, ತಾಂಡಾಗಳಿಗೆ ನೀರು ಪೂರೈಕೆ ಆಗುತ್ತಿದೆ ಎಂದರು.
ಮುಖಂಡ ಅವ್ವಣ್ಣ ಮ್ಯಾಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ದೀರ್ಘಕಾಲದ ಪ್ರಧಾನಿಯಾಗಿ ದೇಶ ಮುನ್ನಡೆಸಿರುವ ಮೋದಿ, ಅಂಬೇಡ್ಕರ್ ಆಶಯದಂತೆ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ರಾಜ್ಯದಲ್ಲಿ 40 ಸಾವಿರ ಸಸಿಗಳನ್ನು ನೆಡಲಾಗಿದೆ ಎಂದರು.
ಜಿಲ್ಲಾಧ್ಯಕ್ಷರಾದ ಚಂದು ಪಾಟೀಲ್, ಅಶೋಕ್ ಬಗಲಿ, ಮಾಜಿ ಸಚಿವ ಬಾಬುರಾವ ಚವ್ಹಾಣ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ಮುಖಂಡರಾದ ಶರಣಪ್ಪ ತಳವಾರ, ನಿತೀನ್ ಗುತ್ತೇದಾರ, ಸಿದ್ದಾಜಿ ಪಾಟೀಲ್, ಚನ್ನಮ್ಮ ಪಾಟೀಲ್, ಶೋಭಾ ಬಾಣಿ, ಸುಧಾ ಹಾಲಕಾಯಿ, ಲಿಂಗರಾಜ ಬಿರಾದಾರ, ಹರ್ಷಾನಂದ ಗುತ್ತೇದಾರ, ಗಿರಿರಾಜ ಯಳಮೇಲಿ, ಗಿರೀಶ ಭಜಂತ್ರಿ ಇತರರಿದ್ದರು. ಶಿವಯೋಗಿ ನಾಗನಹಳ್ಳಿ ವಂದಿಸಿದರು. ಮಹಾದೇವ ಬೆಳಮಗಿ ನಿರೂಪಣೆ ಮಾಡಿದರು.
ಪ್ರಿಯಾಂಕ್ ರ್ಖಗೆ ಅಜ್ಜ ಎಂಎಸ್ಕೆ ಮಿಲ್ನಲ್ಲಿ ದುಡಿಯುತ್ತಿದ್ದರು. ಅಂತಹ ನೌಕರಿ ನೀಡುವ ಪಿಎಂ ಮಿತ್ರ ಯೋಜನೆ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಉದ್ದೇಶಪೂರ್ವಕವಾಗಿ ಯೋಜನೆ ವಿಳಂಬ ಮಾಡಬಾರದು. ಕೇಂದ್ರ ಸರ್ಕಾರದಿಂದ ಕಲಬುರಗಿ ನಗರದ ರಿಂಗ್ ವೃತ್ತ ರಸ್ತೆ ಮಾಡಲಾಗಿದೆ. ಜೆಜೆಎಂ ನೀರು ಪೂರೈಕೆ ಕ್ರಾಂತಿ ಮಾಡಲಾಗಿದೆ.
-> ಡಾ.ಉಮೇಶ ಜಾಧವ್, ಮಾಜಿ ಸಂಸದ