- ಎಂಎಲ್ಸಿ ಶಶೀಲ ನಮೋಶಿ ಬಣ್ಣನೆ
- ಉದ್ಯೋಗಿ, ಉದ್ಯೋಗದಾತರಿಗೆ ನೆರವು
ಕಲಬುರಗಿ: ಪ್ರತಿ ಉದ್ಯೋಗಿಗೆ ಆತನ ಮೊದಲ ಕೆಲಸ ಮತ್ತು ಮೊದಲ ವೇತನ ಸ್ಮರಣೀಯವಾಗಿರುತ್ತದೆ. ಎರಡು ವರ್ಷದ ಅವಧಿಯಲ್ಲಿ 3.50 ಕೋಟಿ ಉದ್ಯೋಗ ಸೃಜನೆಯ ಉದ್ದೇಶ ಹೊಂದಿರುವ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆ ಶ್ರಮಿಕ ವರ್ಗಕ್ಕೆ ದೊಡ್ಡ ಕೊಡುಗೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಹೇಳಿದರು.
ನಗರದ ಕೆಕೆಸಿಸಿಯ ಸಭಾಂಗಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಡಿಬಿಟಿ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಂದ (ಆನ್ಲೈನ್) ಪ್ರೋತ್ಸಾಹ ಧನ ವಿತರಣೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಇಪಿಎಫ್ಓ ನೋಂದಾಯಿಯ ಪ್ರತಿ ಕಾರ್ಮಿಕನಿಗೆ ಸಾಮಾಜಿಕ ಭದ್ರತೆ ಒದಗಿಸಲಿದೆ. ಶಿಕ್ಷಣ, ಕೌಶಲ್ಯ, ಉದ್ಯೋಗ, ಸಾಮಾಜಿಕ ಭದ್ರತೆ ಇದು ಪ್ರತಿ ಕಾರ್ಮಿಕನಿಗೆ ಸಿಗಬೇಕಾದ ಸ್ವಾಭಿಮಾನ ಮತ್ತು ಘನತೆಯ ಬದುಕಿನ ಗೌರವದ ಸಂಕೇತವಾಗಿದೆ ಎಂದರು.
ಸಾಮಾನ್ಯ ಭವಿಷ್ಯ ನಿಧಿ ಪ್ರಾಂತೀಯ ಆಯುಕ್ತ ಎಂ.ಸುಬ್ರಮಣ್ಯಮ್ ಪ್ರಾಸ್ತಾವಿಕ ಮಾತನಾಡಿ, ಪ್ರಧಾನಮಂತ್ರಿ ವಿಕಸಿತ ರೋಜಗಾರ ಯೋಜನೆ ಆಗಸ್ಟ್- 2025 ರಿಂದ ಆರಂಭವಾಗಿದ್ದು, ಜು.2026ಕ್ಕೆ ಮುಕ್ತಾಯವಾಗಲಿದೆ. ಈ ಅವಧಿಯಲ್ಲಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಮತ್ತು ಕೆಲಸಕ್ಕೆ ತೆಗೆದುಕೊಳ್ಳುವ ಉದ್ಯೋಗದಾತರಿಗೆ ವಿಶೇಷ ಪ್ರೋತ್ಸಾಹ ದೊರೆಯಲಿದೆ. ಒಂದೇ ದಿನ ಸುಮಾರು 15 ಲಕ್ಷ ಉದ್ಯೋಗಿಗಳಿಗೆ ಡಿ.ಬಿ.ಟಿ ಮೂಲಕ ಪ್ರಧಾನಮಂತ್ರಿಗಳು ಪ್ರೋತ್ಸಾಹ ಧನ ವಿತರಿಸಿದ್ದಾರೆ. ಕರ್ನಾಟಕದ 18,606 ಜನ ಉದ್ಯೋಗಿಗಳು ಮತ್ತು 57 ಉದ್ಯೋಗದಾತರಿಗೆ 10 ಕೋಟಿ ರೂ. ಸಹಾಯಧನ ದೊರೆಯಲಿದೆ ಎಂದರು.
ನೇಮಕಾತಿ ಪತ್ರ ವಿತರಣೆ: ಹೊಸದಾಗಿ ಕೆಲಸಕ್ಕೆ ಆಯ್ಕೆಯಾದ ಯುವಕರಿಗೆ ಲಾಹೋಟಿ ಮೋರ್ಟಸ್, ಶ್ರೀ ಸಿದ್ದಸಿರಿ ಸಹಕಾರಿ ಬ್ಯಾಂಕ್, ಚಂದ್ರಶಿಲ್ಪ ಆಟೋಮೋಟಿವ್ಸ್ ಪ್ರೈ.ಲಿ., ಬಜಾಜ್ ಅರ್ಥ ಮೂವರ್ಸ್ ಪ್ರೈ.ಲಿ. ಸಂಸ್ಥೆಯ ಅಧಿಕಾರಿಗಳು ನೇಮಕಾತಿ ಪತ್ರ ವಿತರಿಸಿ ಶುಭ ಕೋರಿದರು.
ಇ.ಪಿ.ಎಫ್.ಓ ರಿಜಿನಲ್ ಕಮಿಟಿ ಸದಸ್ಯ ಶಂಕರ ಸುಲೇಗಾಂವ, ಕೆ.ಕೆ.ಸಿ.ಸಿ.ಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಧರ್ಮಿಜಿತ್ ಸಿಂಗ್, ಸಮಿರನ್ ದಾಸ್ ಇತರರಿದ್ದರು.
ರು.2400 ಕೋಟಿ ವಿತರಿಸಿದ ಮೋದಿ
ದೆಹಲಿ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಮಾತನಾಡಿದ ನರೇಂದ್ರ ಮೋದಿ, ಉದ್ಯೋಗಿಗಳಿಗೆ ಶಕ್ತಿ ನೀಡುವ ಯೋಜನೆ ಉದ್ಯೋಗಿ ಮತ್ತು ಉದ್ಯೋಗದಾತರು ಜತೆ ಜತೆಗೆ ವಿಕಾಸದ ಪರ್ವದಲ್ಲಿ ಹೆಜ್ಜೆ ಇಡುತ್ತಾ ವಿಕಸಿತ ಭಾರತಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂದು ಬಣ್ಣಿಸಿದರು.
ಇಪಿಎಫ್ಓ ನಡಿ ನೋಂದಾಯಿತ ಕಾರ್ಮಿಕರು ಮತ್ತು ಉದ್ಯೋಗದಾತರಿಗೆ ಇರುವ ಸೌಲಭ್ಯಗಳು ಮತ್ತು ಹೊಸ ಕಾರ್ಮಿಕ ಸುಧಾರಣೆಗಳ ಕುರಿತು ಕಾರ್ಮಿಕ ಸಮುದಾಯ ಮತ್ತು ಸಂಟನೆಗಳು, ಉದ್ಯೋಗದಾತರಿಗೆ ಜಾಗೃತಿ ಮೂಡಿಸಲು ನವದೆಹಲಿ ಕೇಂದ್ರಿತ ಕಾರ್ಯಕ್ರಮದಲ್ಲಿ ವಿವಿಧ ಮಾಹಿತಿಯನ್ನು ನೇರ ಪ್ರಸಾರದಲ್ಲಿ ನೀಡಲಾಯಿತು. ಆಗಸ್ಟ್ 2025 ರಿಂದ ಹೊಸದಾಗಿ ಉದ್ಯೋಗಕ್ಕೆ ಸೇರಿದ ಉದ್ಯೋಗಿಗಳಿಗೆ ಮತ್ತು ಉದ್ಯೋಗ ನೀಡಿದ ಉದ್ಯೋಗದಾತರಿಗೆ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 2,400 ಕೋಟಿ ರೂ. ಪ್ರೋತ್ಸಾಹಧನ ವಿತರಿಸಿದರು.