ಕಲಬುರಗಿ: ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮಿತ್ತ ಶುಕ್ರವಾರ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಮತದಾನ ಚುರುಕುಗೊಂಡಿದ್ದು, ಕಲಬುರಗಿ ನಗರದಲ್ಲಿ ಬೆಳಗ್ಗೆ ಎಂಟು ಗಂಟೆಯಿಂದಲೇ ಶಿಕ್ಷಕರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾವಣೆ ಮಾಡಿದರು.
ಅಭ್ಯರ್ಥಿಗಳ ಮತಗಟ್ಟೆ ಭೇಟಿ: ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ನೂತನ ವಿದ್ಯಾಲಯ ಸೇರಿದಂತೆ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ, ಚುನಾವಣೆ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಮತಗಟ್ಟೆ ಬಳಿ ಮಾಹಿತಿ ಕೇಂದ್ರ: ಮತಗಟ್ಟೆಗಳ ಬಳಿ ವಿವಿಧ ಅಭ್ಯರ್ಥಿಗಳ ಪರ ಬೆಂಬಲಿಗರು ಮಾಹಿತಿ ಕೇಂದ್ರವನ್ನು ಸ್ಥಾಪಿಸಿ, ಶಿಕ್ಷಕರಿಗೆ ಮಾಹಿತಿ ನೀಡುವ ಜೊತೆಗೆ ಅಂತಿಮ ಹಂತದ ಮನವರಿಕೆ ಪ್ರಯತ್ನವನ್ನು ಮಾಡಿದರು.
ಸಂಜೆ ನಾಲ್ಕು ಗಂಟೆವರೆಗೆ ಮತದಾನ ನಡೆಯಲಿದ್ದು, ಪ್ರಬುದ್ಧರ ಚುನಾವಣೆ ಎಂದೇ ಖ್ಯಾತ ಶಿಕ್ಷಕರ ಕ್ಷೇತ್ರದ ಚುನಾವಣೆಯ ಭವಿಷ್ಯವೂ ಅ.27ಕ್ಕೆ ಹೊರಬೀಳಲಿದೆ.