- ಕೆಂಪು ಮಣ್ಣು ಅಕ್ರಮ ತಡೆಯಿರಿ
ಚಿಂಚೋಳಿ : ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ, ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪುರ ಗ್ರಾಮದ ಸರ್ವೆ ನಂ.126 ಮತ್ತು 127 ಹಾಗೂ 173 ರಲ್ಲಿ 2002 ರಲ್ಲಿ ಮಂಜೂರು ಮಾಡಿದ್ದ 188 ಎಕರೆ ಭೂಮಿ ಫಲಾನುಭವಿಗಳಾದ ಭೂರಹಿತ ಕೃಷಿ ಕಾರ್ಮಿಕರು ಮತ್ತು ಮಾಜಿ ಸೈನಿಕರಿಗೆ ಅಳತೆ ಮಾಡಿಸಿ ಹಸ್ತಾಂತರಿಸಲು ತೊಡಕಾಗಿರುವ ಗಡಿ ವಿವಾದ ಬಗೆಹರಿಸಲು ಕರ್ನಾಟಕ ಮತ್ತು ತೆಲಂಗಾಣದ ಮಧ್ಯೆ ಸಮನ್ವಯ ಸಾಧಿಸಿ ಸರ್ವೆ ಮಾಡಿಸಲು ಕ್ರಮಕೈಗೊಳ್ಳುವಂತೆ ಶಾಸಕ ಡಾ. ಅವಿನಾಶ ಜಾಧವ್ ಮನವಿ ಸಲ್ಲಿಸಿದರು.
ಶಾದಿಪುರ ಗ್ರಾಮದಲ್ಲಿ 188.00 ಎಕರೆ ಭೂಮಿಯನ್ನು ಭೂ ಸುಧಾರಣಾ ಕಾಯ್ದೆಯಡಿ 59 ಮಂದಿ ಭೂ ರಹಿತ ಕೃಷಿ ಕಾರ್ಮಿಕರಿಗೆ ಮತ್ತು ಮಾಜಿ ಸೈನಿಕರಿಗೆ ಮಂಜೂರಾದ ಜಮೀನಾಗಿರುತ್ತದೆ. ಭೂ ಮಂಜೂರಾತಿ ಆಧರಿಸಿ ಈ ಭೂಮಿಯನ್ನು 2002ರಲ್ಲಿಯೇ 59 ಭೂಹೀನ ಬಡ ರೈತರ ಹೆಸರಿನಲ್ಲಿ ಪಹಣಿ ಮಾಡಲಾಗಿದೆ. ಆದರೆ, ಕಳೆದ 24 ವರ್ಷಗಳಿಂದ ಈ ರೈತರಿಗೆ ಭೂಮಿಯ ವಾಸ್ತವಿಕ ಸ್ವಾಧೀನ ದೊರೆತಿಲ್ಲ. ಈ ಹಿಂದೆಯೇ ಜಿಲ್ಲಾಧಿಕಾರಿಗಳು ಗಡಿ ವಿವಾದವನ್ನು ಬಗೆಹರಿಸಲು ಕರ್ನಾಟಕ ಮತ್ತು ತೆಲಂಗಾಣ ಅಧಿಕಾರಿಗಳ ಜಂಟಿ ಸರ್ವೆಗೆ ಪತ್ರ ಬರೆದಿದ್ದರೂ ಒಮ್ಮೆ ಉಭಯ ರಾಜ್ಯಗಳ ನಡುವೆ ಜಂಟಿ ಸರ್ವೆಯೂ ನಡೆದಿದೆ. ಆಗ ತೆಲಂಗಾಣದವರಿಗೆ ಇದು ಕರ್ನಾಟಕದ ಜಮೀನು. ಇದರಲ್ಲಿ ನಮ್ಮ ರಾಜ್ಯದ ಜಮೀನು ಇಲ್ಲವೆಂದು ತಿಳಿದು ಅಳತೆ ಮುಂದೂಡಿದ್ದಾರೆ ಎಂದು ಮನವರಿಕೆ ಮಾಡಿದರು.
ಇದರಿಂದ 25 ವರ್ಷಗಳಿಂದ ಸ್ವಂತ ಭೂಮಿಯ ಕನಸು ಹಾಗೇ ಉಳಿದಿದೆ. ಗಣಿ ಮಾಫಿಯಾದವರು ಅಧಿಕಾರಿಗಳೊಂದಿಗೆ ಭಾಗಿಯಾಗಿ ಕೃಷಿಗೆ ಯೋಗ್ಯವಾದ ಜಮೀನು ಅನ್ನು ನಿರಂತರವಾಗಿ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಬೇಸರ ವ್ಯಕ್ರಪಡಿಸಿದರು.
ಮಂಜೂರಾದ 59 ರೈತ ಕುಟುಂಬಗಳ ಪೈಕಿ ಕೇವಲ 7 ಕುಟುಂಬಗಳು ಮಾತ್ರ ಭೂಮಿಯ ಸ್ವಾಧೀನ ಹೊಂದಿದ್ದು, ಉಳಿದ 52 ಕುಟುಂಬಗಳು ಇಂದಿಗೂ ಭೂಮಿಯಿಂದ ವಂಚಿತರಾಗಿದ್ದಾರೆ. ಜೊತೆಗೆ ಮಣ್ಣು ಮಾಫಿಯಾದವರಿಂದ ರೈತರಿಗೆ ಜೀವ ಬೆದರಿಕೆ ಇದೆ. ಫಲಾನುಭವಿಗಳು ಭೂಮಿ ಉಳಿಸಿಕೊಳ್ಳಲು ಮಹಿಳೆಯರು, ಮಕ್ಕಳೊಂದಿಗೆ ಸ್ಥಳದಲ್ಲಿಯೇ ವಾರದಿಂದ ಧರಣಿ ನಡೆಸುತ್ತಿದ್ದಾರೆ.
ಹೀಗಾಗಿ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ತೆಲಂಗಾಣ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ, ಉಭಯ ರಾಜ್ಯಗಳ ಕಂದಾಯ ಮತ್ತು ಭೂ ದಾಖಲೆ ಇಲಾಖೆಗಳು ಮತ್ತು ಸರ್ವೆ ಆಫ್ ಇಂಡಿಯಾ ಅಧಿಕಾರಿಗಳಿಂದ ಜಮೀನಿನ ಸರ್ವೆ ನಡೆಸಿ ಗಡಿ ಗುರುತಿಸಬೇಕು. ಜೊತೆಗೆ ಸದರಿ ಭೂಮಿಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಗಡಿ ಗುರುತಿಸುವಿಕೆ ಕಾರ್ಯ ಮುಗಿಸಿ ಮಂಜೂರಾದ ಎಲ್ಲಾ ರೈತರಿಗೆ ಕೂಡಲೇ ಭೂಮಿಯ ವಾಸ್ತವಿಕ ಸ್ವಾಧೀನ ಹಸ್ತಾಂತರಿಸಲು ಜಿಲ್ಲಾಡಳಿತಕ್ಕೆ ಆದೇಶಿಸಬೇಕು. ಬಡ ರೈತರ ಹಿತದೃಷ್ಟಿಯಿಂದ ಹಾಗೂ ಕರ್ನಾಟಕದ ಆಸ್ತಿಯನ್ನು ನೆರೆಯ ತೆಲಂಗಾಣದ ಜನರಿಂದ ಮತ್ತು ಗಣಿ ಮಾಫಿಯಾದವರಿಂದ ಉಳಿಸುವ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದರು.
ಶಾದಿಪೂರ ಭಾಗದ 52 ಕ್ಕೂ ಅಧಿಕ ಫಲಾನುಭವಿಗಳ ಹೋರಾಟಕ್ಕೆ ಸ್ಪಂದಿಸಿದ ಶಾಸಕ ಡಾ. ಅವಿನಾಶ ಜಾಧವ್ ಅವರು ಬೆಂಗಳೂರಿನ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಅವರನ್ನು ಭೇಟಿಯಾಗಿ ರೈತರೊಂದಿಗೆ ನಾವಿದ್ದೇವೆ. ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ಭರವಸೆ ನೀಡಿದರು.
ಡಾ. ಅವಿನಾಶ ಜಾಧವ್ ಶಾಸಕ ಚಿಂಚೋಳಿ.