ಕಲಬುರಗಿ

ಆರೋಗ್ಯ ಕಾಪಾಡಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ : ಡಿಸಿ ರಾಹುಲ್ ಪಾಂಡ್ವೆ ಸಲಹೆ

ಯಾದಗಿರಿ: ನಗರವನ್ನು ಶುಚಿಯಾಗಿ ಇಡುವಲ್ಲಿ ಪೌರ ಕಾರ್ಮಿಕರ ಶ್ರಮ ಸಾಕಷ್ಟಿದೆ ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಮ್ ಪಾಂಡ್ವೆ ಹೇಳಿದರು.

ನಗರಸಭೆ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಳಗಿನ ಜಾವ ನಗರದ ಎಲ್ಲ ವಾರ್ಡಗಳಿಗೆ ತೆರಳಿ ಕಸ ಗೂಡಿಸಿ,ಎತ್ತಿಹಾಕಿ,ಚರಂಡಿ ಶುಚಿಗೊಳಿಸುವ ಕಾಯಕ ನಿಮ್ಮಿಂದಲ್ಲೇ ಊರುಗಳು ಸ್ವಚ್ಛತೆ ಕಾಣುತ್ತಿವೆ ಎಂದರು.

ಮುಖ್ಯವಾಗಿ ಪೌರ‌ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ನಿಗಾವಹಿಸಬೇಕು. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಮತ್ತೋಂದಿಲ್ಲ ಎಂದ ಅವರು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರು.

ಶಿಕ್ಷಣದಿಂದಲ್ಲೇ ಸರ್ವಾಂಗಿಣ ಅಭಿವೃದ್ಧಿ ಸಾಧ್ಯವಿದೆ. ಎಷ್ಟೇ ಕಷ್ಟವಾದರೂ ಶಿಕ್ಷಣ ಕೊಡಿಸುವುದು ನಿಲ್ಲಿಸಬೇಡಿ ಎಂದರು.

ಮುಖ್ಯ ಅತಿಥಿಗಳಾಗಿ ಪೌರಾಯುಕ್ತ ಉಮೇಶ ಚವ್ಹಾಣ ಅವರು ಮಾತನಾಡಿ, ನಗರದ ಅಭಿವೃದ್ಧಿ ಮತ್ತು ಸೌಂದರ್ಯಕ್ಕೆ ಪೌರ‌ಕಾರ್ಮಿಕರು ಸಾಕಷ್ಟು ಕೆಲಸ ಮಾಡುತ್ತಿದ್ದಾರೆಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರ ಅತಿಥಿಗಳಾಗಿ ಭಾಗವಹಿಸಿದ್ದರು. ಇದೇ ವೇಳೆ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ 106 ಪೌರ ಕಾರ್ಮಿಕರಿಗೆ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರು ಸಮವಸ್ತ್ರ ವಿತರಿಸಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ವಿವಿಧ ಆಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಶಂಭುಲಿಂಗ, ಸಂಘದ ರಾಜ್ಯ ಪರಿಷತ್ತಿನ ಸದಸ್ಯ ರಮೇಶ ಶನಿವಾರಂ, ತಾಲೂಕು ಘಟಕದ ಅಧ್ಯಕ್ಷ ರವಿಕುಮಾರ ದಾಸನ, ಎಇಇಗಳಾದ ರಾಕೇಶರೆಡ್ಡಿ, ಪ್ರಶಾಂತ, ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಶರಣಮ್ಮ, ಸಿದ್ದಾರ್ಥ,ಮಲ್ಲಿಕಾರ್ಜುನ ಇದ್ದರು.