ಕಲಬುರಗಿಯ ಗೋದುತಾಯಿ ಮಹಾವಿದ್ಯಾಯಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಆಯೋಜಿಸಿದ್ದ ಅಂತರ ಕಾಲೇಜು ಸಂಸ್ಕೃತಿ ಪುನಶ್ಚೇತನ ಶಿಬಿರವನ್ನು ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್​.ಅಪ್ಪ ಉದ್ಘಾಟಿಸಿದರು. ಡಾ.ಮೀನಾಕ್ಷಿ ಬಾಳಿ, ಡಾ.ಸುರೇಶ ಜಾಧವ್​, ಡಾ.ರೊಲೇಕರ ನಾರಾಯಣ, ಡಾ.ಪುಟ್ಟಮಣಿ ದೇವಿದಾಸ ಇತರರಿದ್ದರು. 
ಕಲಬುರಗಿ

ವ್ಯಕ್ತಿತ್ವ ರೂಪಿಸುವ ಸಾಹಿತ್ಯ

ಕಲಬುರಗಿ: ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದ ಮುಖಾಂತರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ವಚನ ಸಾಹಿತ್ಯ, ತತ್ವಪದ, ದಾಸ ಸಾಹಿತ್ಯ, ಆಧುನಿಕ ಸಾಹಿತ್ಯ ಮೊದಲಾದವನ್ನು ವಿಶಾಲ ದೃಷ್ಟಿಯಿಂದ ಅರಿತುಕೊಳ್ಳುವ ಅಗತ್ಯವಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್​.ಅಪ್ಪ ಹೇಳಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಾವಿದ್ಯಾಲಯದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಮಂಗಳವಾರ ಆಯೋಜಿಸಿದ್ದ ಅಂತರ ಕಾಲೇಜು ಸಂಸ್ಕೃತಿ ಪುನಶ್ಚೇತನ ಶಿಬಿರ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯ ಅರಿಯುವ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು.

ಬಸವಣ್ಣನವರ ಇವನಾರವ ಇವನಾರವ ಎನ್ನದೆ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ ಎಂಬ ನುಡಿ, ಕನಕದಾಸರ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೆನಾದರೂ ಬಲ್ಲಿರೆ.. ಕುವೆಂಪು ಅವರ ಕೋಗಿಲೆಗಾವ ಕುಲವಿದೆ ಎಂಬ ನುಡಿಗಳು ವಿಶ್ವಮಾನವ ಸಂದೇಶ ನೀಡುತ್ತವೆ. ಇವುಗಳಿಂದ ನಮ್ಮೊಳಗಿನ ಕೀಳರಿಮೆ ಅಳಿಸಿ ಉನ್ನತ ವ್ಯಕ್ತಿತ್ವ ರೂಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾಯಕ ದಾಸೋಹ ಕಲಿಸಿಕೊಡುವ ಸಾಹಿತ್ಯ ಆಗಿದ್ದರಿಂದ ವಿದ್ಯಾರ್ಥಿಗಳಲ್ಲಿ ಅಂತಹ ಮನೋಭಾವ ಬೆಳೆಸಲು ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತವೆ. ಪ್ರತಿಯೊಬ್ಬರೂ ನಿಸ್ವಾರ್ಥದಿಂದ ಕೆಲಸ ಮಾಡಿದರೆ ಫಲ ಸಿಗುತ್ತದೆ. ಮಹಾಕವಿ ಕನಕದಾಸರ ಚರಿತ್ರೆ ಓದಿದಾಗ ಕಾಯಕದಲ್ಲಿ ನಿರತರಾಗಿದ್ದಾಗಲೇ ಕನಕ ಗಡಿಗೆ ಸಿಕ್ಕರೂ ಆಸೆಪಡದೆ ಯಾರಿಗೆ ಸಲ್ಲಬೇಕೋ ಅವರಿಗೆ ಸಲ್ಲಿಸಿದರು ಎಂದು ಬಣ್ಣಿಸಿದರು.

ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ಡಾ.ನೀಲಾಂಬಿಕಾ ಶೇರಿಕಾರ, ಪ್ರಾಚಾಯೆರ್ ಡಾ.ಪುಟ್ಟಮಣಿ ದೇವಿದಾಸ, ಪ್ರಮುಖರಾದ ಡಾ.ಸಿದ್ಧಲಿಂಗರೆಡ್ಡಿ, ಡಾ.ಪ್ರತಿಭಾ ಪಾಟೀಲ್​, ಕನಕ ಅಧ್ಯಯನ ಕೇಂದ್ರದ ಸತ್ಯನಾರಾಯಣ ಇತರರಿದ್ದರು. ಕೇಂದ್ರದ ಸದಸ್ಯರಾದ ಶಿಬಿರದ ಸಂಚಾಲಕಿ ಡಾ.ಮೀನಾಕ್ಷಿ ಬಾಳಿ ಪ್ರಾಸ್ತಾವಿಕ ಮಾತನಾಡಿದರು. ಸಹ ಸಂಚಾಲಕ ಡಾ.ರೊಲೇಕರ ನಾರಾಯಣ ಸ್ವಾಗತಿಸಿದರು. ಡಾ.ಶಾಂತಲಿಂಗ ಘಂಟೆ ನಿರೂಪಣೆ ಮಾಡಿದರು. ಡಾ.ಸುರೇಶ ಜಾಧವ್​ ವಂದಿಸಿದರು.

ದಾಸ ಸಾಹಿತ್ಯ, ತತ್ವಪದ, ವಚನ ಸಾಹಿತ್ಯ ಕುರಿತು ಯುವ ಸಮುದಾಯ ಆಳವಾದ ಅಧ್ಯಯನ ಮಾಡುವ ಅಗತ್ಯವಿದೆ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ತಿರುಚಿ ಹೇಳುವ ಮೂಲಕ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನೈಜತೆಯ ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದು ಮುಖ್ಯವಾಗಿದೆ.
> ಡಾ.ಮೀನಾಕ್ಷಿ ಬಾಳಿ ಸದಸ್ಯೆ, ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ