ಕಲಬುರಗಿ: ಧೈರ್ಯಶಾಲಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಭಾರತ ರತ್ನ ನೀಡಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ತನ್ನ ಜೀವದ ಹಂಗು ತೊರೆದು 174 ಪ್ರಯಾಣಿಕರ ಪ್ರಾಣ ಉಳಿಸಿರುವ ಸ್ಮಿತ್, ಭಾರತದ ಹೆಸರು ವಿಶ್ವದೆಲ್ಲೆಡೆ ಬೆಳಗುವಂತೆ ಮಾಡಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಭಾರತ ರತ್ನ ನೀಡಬೇಕು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ಭೀಕರ ಬರದಿಂದ ರೈತ ತೀವ್ರ ಸಂಕಷ್ಟದಲ್ಲಿದ್ದರೂ ಸರ್ಕಾರ ನೈಯಾಪೈಸೆ ಪರಿಹಾರ ನೀಡಿಲ್ಲ. ಘೋಷಿಸಿದ 2500 ರೂ. ಸಹ ಕೊಟ್ಟಿಲ್ಲ. ಇದನ್ನು ಗಮನಿಸಿದರೆ ಸರ್ಕಾರ ದಿವಾಳಿ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಹಿಂದೆ ನನ್ನ ಮತ್ತು ಕುಮಾರಸ್ವಾಮಿ ಅವಧಿಯಲ್ಲಿ ಸಂಕಷ್ಟ ಅರಿತು ರೈತರು ಕೇಳದಿದ್ದರೂ ಸಾಲ ಮನ್ನಾ ಮಾಡಿದ್ದೇವೆ. ಈಗ ಮನ್ನಾ ಮಾಡಲು ರೈತರು ಬೊಬ್ಬೆ ಹಾಕಿದರೂ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಖಾಲಿ 90 ಸಾವಿರ ಹುದ್ದೆಗಳಲ್ಲಿ ಸರ್ಕಾರ ಕೇವಲ 16 ಸಾವಿರ ಹುದ್ದೆ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಶೇ.20 ಸಹ ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರ ಹಳೆಯ ಪಿಂಚಣಿ ಜಾರಿ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದರೂ ಈವರೆಗೆ ಜಾರಿ ಮಾಡದೆ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ ಎಂದು ಹರಿಹಾಯ್ದರು.
ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ಎನ್.ರವಿಕುಮಾರ್, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಮಾಜಿ ಸಂಸದರಾದ ಡಾ.ಉಮೇಶ ಜಾಧವ್, ಭಗವಂತ ಖೂಬಾ, ಶಾಸಕರಾದ ಡಾ.ಅವಿನಾಶ ಜಾಧವ್, ಬಸವರಾಜ ಮತ್ತಿಮಡು, ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ್ ತೆಲ್ಕೂರ, ಅಮರನಾಥ ಪಾಟೀಲ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ದತ್ತಾತ್ರೇಯ ಪಾಟೀಲ್ ರೇವೂರ, ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್, ಅವ್ವಣ್ಣ ಮ್ಯಾಕೇರಿ, ಶರಣಪ್ಪ ತಳವಾರ, ಮಹಾದೇವ ಬೆಳಮಗಿ, ಶಿವಯೋಗಿ ನಾಗನಳ್ಳಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಮಾಜಿ ಸಚಿವ ವೆಂಕಟರಾವ ನಾಡಗೌಡ, ಬಸವರಾಜ ಬಿರಬಿಟ್ಟೆ, ಕೃಷ್ಣಾ ನಾಯಕ ಇತರರಿದ್ದರು.
ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಶಶೀಲ್ ನಮೋಶಿ ಗೆಲುವು ಖಚಿತ. ಈ ಬಾರಿ ಜೆಡಿಎಸ್ ನಮ್ಮ ಜತೆಗಿರುವುದು ಬಲ ತಂದಿದೆ. ಸಂಟಿತರಾಗಿ ಚುನಾವಣೆ ಎದುರಿಸಲಾಗುವುದು. ಶಿಕ್ಷಕರ ಪರ ಕೆಲಸ ಮಾಡಿದ ನಮೋಶಿಗೆ ಆ ಸಮುದಾಯ ಬೆಂಬಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿ.ಎಸ್. ಯಡಿಯೂರಪ್ಪ, ಮುಂದಿನ ಎಲ್ಲ ಚುನಾವಣೆಗಳಲ್ಲೂ ಜೆಡಿಎಸ್ ನಮ್ಮ ಕೈಜೋಡಿಸಲಿದೆ. ಹಣ, ಹೆಂಡ, ಅಧಿಕಾರ ಬಲದಿಂದ ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿರುವ ಸಿಎಂ ಡಿ.ಕೆ. ಶಿವಕುಮಾರ್ಗೆ ಶಿಕ್ಷಕರು ಪಾಠ ಕಲಿಸಲಿದ್ದಾರೆ ಎಂದರು. 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ&ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, ಮುಖ್ಯಮಂತ್ರಿ ಯಾರು ಎಂಬುದು ಫಲಿತಾಂಶ ನಂತರ ನಿರ್ಧಾರವಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಈ ಕುರಿತು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಪಂಚ ಗ್ಯಾರಂಟಿ ಮೂಲಕ ಸರ್ಕಾರ ಜನರ ದಿಕ್ಕುತಪ್ಪಿಸಿದೆ. ಬಿ.ಎಸ್. ಯಡಿಯೂರಪ್ಪ ಡಿಸಿಎಂ ಮತ್ತು ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ನಾನು ಕೃಷಿ ಸಚಿವನಾಗಿದ್ದೆ. ಆಗ ರೈತರ ಸಾಲ ಮನ್ನಾ ಮಾಡಲಾಗಿತ್ತು. ಆದರೆ ಈ ಸರ್ಕಾರ ಏನು ಮಾಡುತ್ತಿದೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಪ್ರಶ್ನಿಸಿದರು. ಈಶಾನ್ಯ ಶಿಕ್ಷಕ ಸೇರಿ ರಾಜ್ಯದ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ನ ದುರಾಡಳಿತಕ್ಕೆ ಬೇಸತ್ತ ಜನ ಎನ್ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ. ಹೀಗಾಗಿ ಶಶೀಲ್ ನಮೋಶಿ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಶಶೀಲ್ ನಮೋಶಿ ಸೋಮವಾರ ಚುನಾವಣಾಧಿಕಾರಿ ಜಹೀರಾ ನಸೀಮ್ ಅವರಿಗೆ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಖಾಸಗಿ ಹೋಟೆಲ್ನಲ್ಲಿ ಸಭೆ ಸೇರಿದ ಬಿಜೆಪಿ ಮುಖಂಡರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿವಿಧ ಖಾಸಗಿ ಶಾಲಾ&ಕಾಲೇಜು ಉಪನ್ಯಾಸಕರು, ಕಾರ್ಯಕರ್ತರ ಜತೆ ಮಿತ್ರ ಪಕ್ಷ ಜೆಡಿಎಸ್ ಮುಖಂಡರು, ಗಣ್ಯರು ನಾಮಪತ್ರ ಸಲ್ಲಿಕೆಗೆ ಸಾಥ್ ನೀಡಿದರು.
ಎಸ್ಐಆರ್ ಪ್ರಕ್ರಿಯೆಯಲ್ಲಿ ತಪ್ಪು ನಡೆದಿದ್ದರೆ ಅಂಥವರ ವಿರುದ್ಧ ಕ್ರಮ ಜರುಗಲಿ. ಆದರೆ ಖುದ್ದಾಗಿ ಮುಖ್ಯಮಂತ್ರಿ ಬೀದಿಗಿಳಿಯುವ ಮೂಲಕ ಅಧಿಕಾರಿ ವರ್ಗದ ಮೇಲೆ ಒತ್ತಡ ಹೇರುವ ತಂತ್ರ ತರವಲ್ಲ. ಇದನ್ನು ಯಾವ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.> ಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆಗೆ ಹೊರಟಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಶಿಕ್ಷಕರು ಬೇಸತ್ತಿದ್ದಾರೆ. ನೀಡಿದ ಯಾವ ಭರವಸೆಯೂ ಈಡೇರಿಸಿಲ್ಲ. ಶಿಕ್ಷಕರ ಖಾಲಿ ಹುದ್ದೆ ಭರ್ತಿ ಮಾಡುತ್ತಿಲ್ಲ. ಓಪಿಎಸ್ ಜಾರಿ ಮರೆಯಲಾಗಿದೆ. ಈ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಕೊನೆಯ ಆದ್ಯತೆ ನೀಡಿದ್ದರಿಂದ ಎನ್ಡಿಎ ಅಭ್ಯರ್ಥಿಗಳನ್ನು ಶಿಕ್ಷಕರು ಬೆಂಬಲಿಸಲಿದ್ದಾರೆ.> ಶಶೀಲ್ ನಮೋಶಿ ವಿಧಾನ ಪರಿಷತ್ ಸದಸ್ಯ
ಕಾಂಗ್ರೆಸ್ ರೈತರು, ಶಿಕ್ಷಕರು ಸೇರಿ ಎಲ್ಲರನ್ನು ಅತ್ಯಂತ ನಿಷಷ್ಟವಾಗಿ ಕಾಣುತ್ತಿದೆ. ಶಿಕ್ಷಕರ ಸಮಸ್ಯೆಗಳನ್ನು ಶಾಶ್ವತವಾಗಿ ಇಟ್ಟುಕೊಂಡು ಬಂದಿದ್ದಾರೆ. ಇನ್ನು ಎಸ್ಐಆರ್ ವಿಷಯದಲ್ಲಿ ಎರಡು ಕಡೆ ಮತ ಇದ್ದವರನ್ನು ಡಿಲಿಟ್ ಮಾಡಲೇಬೇಕು. ಎರಡ್ಮೂರು ವೋಟ್ ಇದ್ದವರು ಇವರ ವೋಟ್ ಬ್ಯಾಂಕ್ ಆಗಿದ್ದು, ಅದಕ್ಕೆ ಹೊಟ್ಟೆ ಕಿಚ್ಚು ಶುರು ಆಗಿದೆ. ಶುದ್ಧೀಕರಣ ಆಗುತ್ತಿದ್ದು, ಎಲ್ಲರೂ ಸ್ವಾಗತಿಸಬೇಕು.> ಎನ್.ರವಿಕುಮಾರ್ ಮೇಲ್ಮನೆ ಪ್ರತಿಪಕ್ಷ ಮುಖ್ಯ ಸಚೇತಕ