ಸೇಡಂನಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶದ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಕೊಂಚೂರಿನ ಶ್ರೀ ಸವಿತಾನಂದನಾಥ ಸ್ವಾಮೀಜಿ ಮಾತನಾಡಿದರು. ಶ್ರೀ ಕುಮಾರ ಸ್ವಾಮೀಜಿ, ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಶಿವಕುಮಾರ ಪಾಟೀಲ್​ ತೆಲ್ಕೂರ, ದಿವ್ಯಾ ಹಾಗರಗಿ, ಸಂತೋಷಿರಾಣಿ ಪಾಟೀಲ್​ ತೆಲ್ಕೂರ ಇದ್ದರು.  
ಕಲಬುರಗಿ

ಹಿಂದೂ ಸಮಾಜದ ಉಳಿವಿಗಾಗಿ ಒಗ್ಗೋಡೋಣ

ಶ್ರೀ ಸವಿತಾನಂದನಾಥ ಸ್ವಾಮೀಜಿ ಅನಿಸಿಕೆ

ಸೇಡಂನಲ್ಲಿ ಪೂರ್ಬಭಾವಿ ಸಭೆ

ಸೇಡಂ: ಕೆಲವರು ಹಿಂದೂ ಸಮಾಜವನ್ನು ಜಾತಿ ಹೆಸರಿನಲ್ಲಿ ಒಡೆದು ಹಾಕಿ, ನಾಶ ಮಾಡುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಮೆಟ್ಟಿ ನಾವಲ್ಲರೂ ಒಗ್ಗೂಡಬೇಕಾಗಿದೆ ಎಂದು ಕೊಂಚೂರಿನ ಶ್ರೀ ಸವಿತಾನಂದನಾಥ ಸ್ವಾಮೀಜಿ ಹೇಳಿದರು.

ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಕಲಬುರಗಿಯಲ್ಲಿ ಸೆ.27ರಂದು ಜರುಗುವ ಬಸವಾದಿ ಶಿವರಶರಣ ಹಿಂದೂ ಸಮಾವೇಶದ ನಿಮಿತ್ತ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹಿಂದೂ ಧರ್ಮದ ವಿರುದ್ಧ ಎರಡು ಧರ್ಮಗಳು ಸತತವಾಗಿ ದಾಳಿ ನಡೆಸುತ್ತಿವೆ. ಒಂದು ನಮ್ಮನ್ನು ಮತಾಂತರ ಮಾಡುವ ಪ್ರಯತ್ನದಲ್ಲಿದ್ದರೆ, ಇನ್ನೊಂದು ಹಿಂದೂ ಯುವತಿಯರನ್ನು ಪ್ರೀತಿ-ಪ್ರೇಮದ ಹೆಸರಿನಲ್ಲಿ ಮತಾಂತರಗೊಳಿಸುವ ಕೆಲಸ ಮಾಡುತ್ತಿದೆ. ಇದೊಂದು ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಎಚ್ಚರಿಸಿದರು.

ಸೆ.27ರಂದು ಕಲಬುರಗಿಯ ಎನ್​ವಿ ಮೈದಾನದಲ್ಲಿ ಜರುಗುವ ಬೃಹತ್​ ಸಮಾವೇಶದಲ್ಲಿ ತಾಲೂಕಿನ ಜನ ಕುಟುಂಬ ಸಮೇತ ಭಾಗವಹಿಸಬೇಕು. ಕೆಲವರು ಬಸವಣ್ಣ ಅವರನ್ನು ಗುತ್ತಿಗೆ ಪಡೆದಂತೆ ಮಾತನಾಡುತ್ತಾರೆ. ಯಾರೂ ಯಾರ ಸ್ವತ್ತಲ್ಲ. ಕನ್ಹೇರಿ ಮಠದ ಪೂಜ್ಯರು ಕಾರ್ಯಕ್ರಮದಲ್ಲಿ ಧರ್ಮದ ಉಳಿವಿನ ಜತೆಗೆ ರೈತನ ಬದುಕು ಕಟ್ಟಿಕೊಳ್ಳುವ ಬಗ್ಗೆ ತಿಳಿಸಿಕೊಡಲಿದ್ದಾರೆ. ಹಿಂದೂ ಸಮಾಜದ ಪ್ರತಿಯೊಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಕನ್ಹೇರಿ ಮಠದ ಶ್ರೀ ಕುಮಾರ ಸ್ವಾಮೀಜಿ ಮಾತನಾಡಿ, ಶ್ರೀ ಅದೃಷ್ಯ ಕಾಡಸಿದ್ಧೇಶ್ವರ ಸ್ವಾಮಿಗಳು ನಡೆದಾಡುವ ವಿಶ್ವವಿದ್ಯಾಲಯವಾಗಿದ್ದಾರೆ. ಅವರು ಯಾವುದೇ ಮಾತನಾಡಿದರು ಅದರ ಹಿಂದೆ ದೊಡ್ಡ ಮಟ್ಟದ ಅಧ್ಯಯನವಿರುತ್ತದೆ. ಹೀಗಾಗಿ ತಾವೆಲ್ಲರೂ ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಪೂಜ್ಯರ ಕೈ ಬಲಪಡಿಸಿ ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಸಮಾವೇಶದ ಜಿಲ್ಲಾ ಸಂಯೋಜಕ ಶಿವಕುಮಾರ ಪಾಟೀಲ್​ ತೆಲ್ಕೂರ ಮಾತನಾಡಿ, ಸೇಡಂನಲ್ಲಿ ಇತ್ತೀಚೆಗೆ ಮತಾಂದರ ದಬ್ಬಾಳಿಕೆ ಹೆಚ್ಚಾಗಿದೆ. ಹೀಗಾಗಿ ನಾವೆಲ್ಲರೂ ಒಟ್ಟಾಗುವುದು ಅವಶ್ಯವಿದೆ. ಬರುವ 27ರಂದು ಜರುಗುವ ಸಮಾವೇಶದಲ್ಲಿ ತಾಲೂಕಿನಿಂದ ಅತೀ ಹೆಚ್ಚು ಸಂಖ್ಯೆಯ ಜನರು ಬರಲಿದ್ದೇವೆ ಎಂದು ಭರವಸೆ ನೀಡಿದರು.

ಸುಲೇಪೇಟದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸಂತೋಷಿರಾಣಿ ಪಾಟೀಲ್​ ತೆಲ್ಕೂರ, ದಿವ್ಯಾ ಹಾಗರಗಿ ಮಾತನಾಡಿದರು.

ಸೂರ್ಯಕಾಂತ ನಿಂಗದಾಳ ಪ್ರಾಸ್ತಾವಿಕ ಮಾತನಾಡಿದರು. ಮುರಗಯ್ಯಸ್ವಾಮಿ ತೆಲ್ಕೂರ ಪ್ರಾರ್ಥಿಸಿದರು. ನೆಹರು ರಾಠೋಡ್​ ಸ್ವಾಗತಿಸಿದರು. ಮಲ್ಲಿಕಾರ್ಜುನ ರಾಯಪ್ಪಗೌಡ ನಿರೂಪಣೆ ಮಾಡಿದರು.

ಹಿಂದೂಗಳಾದ ನಾವು ಜಾತಿ ಹೆಸರಿನಲ್ಲಿ ಜಗಳವಾಡುತ್ತಾ ಕೂತಿದ್ದೇವೆ ಹೊರತು ಒಗ್ಗಟ್ಟಾಗುತ್ತಿಲ್ಲ. ಇದು ಹೀಗೆ ಮುಂದುವರೆದರೆ ಭಾರತ ಮತ್ತೊಂದು ಬಾಂಗ್ಲಾ ಆಗಲಿದೆ ಎನ್ನುವ ಅರಿವು ಹೊಂದಿರಬೇಕು. ಧರ್ಮ ರಕ್ಷಣೆಗಾಗಿ ಎಲ್ಲರೂ ಒಂದಾಗಬೇಕು.
> ಶ್ರೀ ಸವಿತಾನಂದನಾಥ ಸ್ವಾಮೀಜಿ, ಕೊಂಚೂರ