ಚಿಂಚೋಳಿ: ಶ್ರೀ ಸಂತ ಸೇವಾಲಾಲ್ ಹಾಗೂ ಶ್ರೀ ರಾಮರಾವ ಮಹಾರಾಜರು ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ಚೇತನರು. ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದ್ದು, ವರದಣೆ ಕೊಡುವುದು ಮತ್ತು ಪಡೆಯುವುದು ಸಂಪೂರ್ಣ ನಿಲ್ಲಿಸಬೇಕು ಎಂದು ಪೌರದೇವಿಯ ಶ್ರೀ ಬಾಬುಸಿಂಗ್ ಮಹಾರಾಜ ಕರೆ ನೀಡಿದರು.
ಸಲಗರಬಸಂತಪುರ ಸೇರಿ ಕ್ರಾಸ್ನಲ್ಲಿ ಬಂಜಾರ ವರದಕ್ಷಿಣೆ ಹಾಗೂ ಸಾಮಾಜಿಕ ಸಮಸ್ಯೆಗಳ ಜಾಗೃತ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಾಪಂಚಾಯತ್ ಸಭೆ ಉದ್ಘಾಟಿಸಿ ಮಾತನಾಡಿ, ನಮ್ಮ ಮೂಲ ಸಂಸ್ಕೃತಿ, ಸಂಸ್ಕಾರ ಮತ್ತು ಪದ್ಧತಿಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಮಾಜದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಧರ್ಮಾಂತರ ಹಾಗೂ ಮತಾಂತರಗಳನ್ನು ತಡೆಯಲು ಸಮಾಜ ಬಾಂಧವರು ಸಂಘಟಿತರಾಗಬೇಕು. ಯುವತಿಯರ ಮೇಲಿನ ಶೋಷಣೆ ನಿಲ್ಲಬೇಕು ಎಂದರು.
ಶಾಸಕ ಡಾ.ಅವಿನಾಶ ಜಾಧವ್ ಮಾತನಾಡಿ, ವರದಕ್ಷಣೆ ಕಿರುಕುಳ ಪ್ರಕರಣ ದಿನೇ-ದಿನೆ ಹೆಚ್ಚಾಗುತ್ತಿದ್ದು, ತಡೆಗಟ್ಟಲು ಸಮಾಜ ಸಂಘಟಿತವಾಗಬೇಕು. ಪಾಲಕರು ಜಾಗೃತರಾಗಿ ವರಕ್ಷದಣೆ ಪಡೆಯುವ ಪದ್ಧತಿ ಕೈಬೀಡಬೇಕು. ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಸರ್ಕಾರದಿಂದಲೂ ಪರಿಣಾಮಕಾರಿಯಾಗಿ ಆಗಬೇಕು ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್ ಮಾತನಾಡಿ, ನಮ್ಮ ಪರಿವಾರದಲ್ಲಿ ಇಂದಿಗೂ ವರದಣೆ ಪಡೆಯುವುದಾಗಲಿ, ನೀಡುವುದಾಗಲಿ ಇಲ್ಲ. ಕ್ಷೇತ್ರದಲ್ಲಿ ಅದ್ಬುತ ಜಾಗೃತ ಸಮಿತಿ ರಚಿಸಿದ್ದು, 346 ಜನ ಸಮಿತಿಯಲ್ಲಿದ್ದಾರೆ. ಮೊದಲು ನಮ್ಮಿಂದಲೇ ವರದಕ್ಷಣೆ ನಿಷೇಧವಾಗಲಿ. ಒಂದು ವೇಳೆ ನಮ್ಮಲ್ಲಿ ಯಾರಾದ್ರೂ ವರದಣೆ ಪಡೆದಿರುವುದು ತಿಳಿದು ಬಂದರೆ ಅವರ ಮನೆಯ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದರು.
ಮಾಜಿ ಸಂಸದ ಡಾ.ಉಮೇಶ ಜಾಧವ್ ಮಾತನಾಡಿ, ಶ್ರೀ ರಾಮರಾವ ಮಹಾರಾಜರ ಕರ್ಮಭೂಮಿ ಚಿಂಚೋಳಿ ಕ್ಷೇತ್ರವಾಗಿದ್ದು, ಶ್ರೀ ಬಾಬುಸಿಂಗ್ ಮಹಾರಾಜರು ಪ್ರತಿ ತಾಂಡಾಗಳಲ್ಲಿ ಸಂಚರಿಸಿ ವರದಣೆ, ಕುಡಿತ, ಮತಾಂತರ ನಿಷೇಧಕ್ಕೆ ಜಾಗೃತಿ ಮೂಡಿಸಲು ಮುಂದಾಗಬೇಕು. ಬಂಜಾರ ಸಮಾಜದ ತಾಯಂದಿರರು ಜಾಗೃತರಾಗಬೇಕು. ವರದಣೆ ಪಡೆಯುವುದಿಲ್ಲ ಎಂಬ ಸಂಕಲ್ಪ ಮಾಡಬೇಕು. 1961ರಲ್ಲಿ ವರದಣೆ ನಿಷೇಧ ಕಾನೂನು ಜಾರಿಯಲ್ಲಿದ್ದು, ಇದನ್ನು ಸರಿಯಾಗಿ ಅನುಷ್ಠಾನಗೊಳಿಸಿ ದೇಶಕ್ಕೆ ಬಂಜಾರ ಸಮಾಜ ಮಾದರಿಯಾಗಿಸೋಣ ಎಂದು ಕರೆ ನೀಡಿದರು.
ಶ್ರೀ ಪರ್ವತಲಿಂಗ ಪರಮೇಶ್ವರ ಮಹಾರಾಜ, ಶ್ರೀ ವಿಠಲ ಮಹಾರಾಜ, ಶ್ರೀ ನಾಗನಾಥ ಮಹಾರಾಜ, ಶ್ರೀ ಬಳಿರಾಮ ಮಹಾರಾಜ, ಶ್ರೀ ಜೇಮಸಿಂಗ್ ಮಹಾರಾಜ, ಶ್ರೀ ರಾಜು ಮಹಾರಾಜ, ಶ್ರೀ ಮಾಣಿಕ ಬಾಬಾ, ದೇವಗಿರಿ ಶ್ರೀ ಫುಲಸಿಂಗ್ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.
ಸಮಿತಿ ಅಧ್ಯಕ್ಷ ಬಲಭೀಮ ನಾಯಕ ಹಾಗೂ ಗುರುನಾಥ ರಾಠೋಡ್ ಅವರು ಮಹಾಪಂಚಾಯತ್ ಸಭೆಯ ರ್ನಿಣಯಗಳನ್ನು ಮಂಡಿಸಿದರು. ಮಾಜಿ ಸಚಿವ ರೇವುನಾಯಕ ಬೆಳಮಗಿ, ಪ್ರಮುಖರಾದ ಬಾಳಸಾಹೇಬ್ ರಾಠೋಡ್, ಮೇರಾಜ್ ರಾಠೋಡ್, ರಾಮಶೆಟ್ಟಿ ಪವಾರ್, ಮೋತಿರಾಮ ನಾಯಕ, ತಾರಾಸಿಂಗ್ ದಳಪತಿ, ರಾಜು ಪವಾರ್, ಸಂತೋಷಕುಮಾರ ಚವ್ಹಾಣ್, ಅಶೋಕ ಚವ್ಹಾಣ್, ಪ್ರೇಮಸಿಂಗ್ ಜಾಧವ್, ದೇವಲಾ ನಾಯಕ, ಬನ್ಸಿಲಾಲ್, ಡಾ.ದೀಪಕ ರಾಠೋಡ್, ಸಂಜುಕುಮಾರ ಚವ್ಹಾಣ್, ಮಲ್ಲಿಕಾರ್ಜುನ ಪಾಟೀಲ್, ರಾಮರೆಡ್ಡಿ ಪಾಟೀಲ್, ಮಲ್ಲು ಕೊಡಂಬುಲ್, ಶೇಖರ ಶಹಾಪುರ, ಯುವರಾಜ ರಾಠೋಡ್, ವಿನಾಯಕ ಚವ್ಹಾಣ್, ಭಾಸ್ಕರ ರಾಠೋಡ್, ಶಿವಾಜಿ ಜಾಧವ್, ಉಮೇಶ ರಾಠೋಡ್ ಇತರರಿದ್ದರು.
- ವಿವಾಹದಲ್ಲಿ ವಧುವಿನ ಕಡೆಯಿಂದ ಒಂದೂವರೆ ತೊಲ ಬಂಗಾರ ಮಾತ್ರ ಪಡೆಯಬೇಕು
- ವಿವಾಹ ಕಾರ್ಯಕ್ರಮದಲ್ಲಿ ಡಿಜೆ ಸೌಂಡ್ ಬಳಸುವಂತಿಲ್ಲ
- ಹಳದಿ ಕಾರ್ಯಕ್ರಮ ಸಂಪೂರ್ಣ ನಿಷೇಧ
- ನಕಡ್ಡಾಯವಾಗಿ 20 ರೂ. ಸ್ಟಾಂಪ್ ಪೇಪರ್ನಲ್ಲಿ ವರದಣೆ ವಿಷಯ ಸಮೂದಿಸಿ ಎರಡು ತಾಂಡಾದ ನಾಯಕರಿಗೆ ಸಲ್ಲಿಸಬೇಕು
ಪುರಾತನ ಪದ್ದತಿಯಂತೆ ವಧುವಿನ ಕುಟುಂಬಕ್ಕೆ ಗೋವು ನೀಡಿ ಮದುವೆ ಮಾಡುವ ಪದ್ಧತಿ ಮರು ಆರಂಭಿಸಬೇಕು. "ಧರ್ಮೋ ರತಿ ರತಃ' ಎಂಬ ತತ್ವದಂತೆ ಧರ್ಮ ರಕ್ಷಣೆ ಮತ್ತು ಐಕ್ಯತೆಗಾಗಿ ಸಮಾಜದ ನಾಯಕರು ಒಂದಾಗಬೇಕು.> ಶ್ರೀ ಬಾಬುಸಿಂಗ್ ಮಹಾರಾಜ, ಪೌರದೇವಿ
ಪ್ರತಿದಿನ 17 ಜನ ವರದಕ್ಷಣೆ ಕಿರುಕುಳ, ದಿನಕ್ಕೆ 119 ಅತ್ಯಾಚಾರ ಪ್ರಕರಣ ದಾಖಲಾಗುತ್ತಿವೆ. ಶೋಷಣೆ, ಕೊಲೆ ನಿರಂತರವಾಗಿದೆ. ಬಂಜಾರ ಸಮಾಜದಲ್ಲಿ ಇತ್ತೀಚೆಗೆ ವರದಕ್ಷಣೆ ಕಿರುಕುಳದಿಂದ ಶಿಲ್ಪಾ, ಐಶ್ವರ್ಯ ಅಸುನೀಗಿದ್ದಾರೆ. ತೆಲಂಗಾಣ, ಪಂಜಾಬ್ ಸೇರಿ ವಿವಿಧೆಡೆ ಮತಾಂತರ ಪ್ರಕರಣ ಬೆಳಕಿಗೆ ಬಂದಿವೆ. ಬಂಜಾರ ಸಮಾಜ ಸಂಘಟಿತವಾಗಬೇಕು. ಅಂದಾಗಲೇ ಈ ಎಲ್ಲ ಸಮಸ್ಯೆಗಳ ವಿರುದ್ಧ ಹೋರಾಡಲು ಸಾಧ್ಯ.> ಸುಭಾಷ ರಾಠೋಡ್, ಕೆಪಿಸಿಸಿ ಉಪಾಧ್ಯಕ್ಷ