ಜೇವರ್ಗಿ: ಮುಂಬರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೇನೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ ಧರ್ಮಸಿಂಗ್ ಹೇಳಿದರು.
ಹಳೇ ತಹಸಿಲ್ ಕಚೇರಿ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಜೇವರ್ಗಿ ಹಾಗೂ ಯಡ್ರಾಮಿ ಶರಣರು, ಸಂತರು, ದಾರ್ಶನಿಕರು, ವಚನಕಾರರು, ತತ್ವಪದಕಾರರು ಬಾಳಿಬೆಳಗಿದ ಪೂಣ್ಯ ಭೂಮಿಯಾಗಿದೆ. ನಮ್ಮ ನೆಲ ಸಗರನಾಡಿನ ಹೆಬ್ಬಾಗಿಲು ಎಂದು ಕರೆಸಿಕೊಂಡಿದೆ. ಶರಣರ ಆಚಾರ-ವಿಚಾರ, ನಡೆ-ನುಡಿಗಳನ್ನು ಅಳವಡಿಸಿಕೊಂಡು ಸಾಗಿದಾಗ ಜೀವನದಲ್ಲಿ ಯಶಸ್ಸು ಸಿಗಲು ಸಾಧ್ಯ ಎಂದರು.
ಇಂದಿನ ದಿನಗಳಲ್ಲಿ ಯುವಕರು ಮೊಬೈಲ್ ಬಳಕೆಯಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಅದನ್ನು ಬಿಟ್ಟು ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಜೇವರ್ಗಿಯ ಷಣ್ಮುಖಶಿವಯೋಗಿಗಳು, ಕಡಕೋಳ ಮಡಿವಾಳೇಶ್ವರರು, ಚನ್ನೂರಿನ ಜಲಾಲ್ಸಾಬರು, ರಾಂಪೂರಿನ ಬಕ್ಕಪ್ಪಯ್ಯ, ನೆಲೋಗಿಯ ಕೋಲ ಶಾಂತಯ್ಯ, ಅರಳಗುಂಡಗಿಯ ಶರಣಬಸವೇಶ್ವರರು, ಗಂವ್ಹಾರದ ಶ್ರೀ ವಿಶ್ವಾರಾದ್ಯರು ಸೇರಿ ಸಂತರು, ಶರಣರು ಈ ಭೂಮಿಯಲ್ಲಿ ನಡೆದಾಡಿದ್ದಾರೆ. ಇಂತಹ ನೆಲದಲ್ಲಿ ಬದುಕುತ್ತಿರುವುದು ನಮ್ಮ ಸುದೈವ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷರಾದ ಡಾ.ಗೋವಿಂದರಾಜ ಆಲ್ದಾಳ ಮಾತನಾಡಿ, ಜನಪದ ಸಾಹಿತ್ಯಕ್ಕೆ ಜೇವರ್ಗಿ ವಿಶಿಷ್ಟ ಸೇವೆ ಸಲ್ಲಿಸಿದೆ. ಇಲ್ಲಿಯ ತತ್ವಪದಗಳು ಭಜನೆ ಹಾಡುಗಳಾಗಿ ಜನಪ್ರಿಯತೆ ಪಡೆದಿವೆ. ಅಲ್ಲದೇ ಬಯಲಾಟ ಮತ್ತು ನಾಟಕ ರಚನೆ ಮಾಡಿದ ನೆಲೋಗಿ ತಾತ್ಯಾ ಸಾಹೇಬ್, ಯನಗುಂಟಿಯ ವೀರಮ್ಮ, ರಂಜಣಗಿಯ ರಾಮಸಂಗ, ಕೂಡಿ ಬಾಬಾಸಾಹೇಬ, ಕಡ್ಲೆವಾಡ ಸಿದ್ದಪ್ಪ, ಮಾವನೂರ ಚೆನ್ನಕವಿ, ಆಲ್ದಾಳ ನಬಿಗೌಡ, ಅರಳಗುಂಡಗಿ ಭಾಗಮ್ಮ ಗೌಡತಿ ಅವರ ತರುವಾಯ ಇನ್ನೂ ನೂರಾರು ಜನ ಕಲಾವಿದರು ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದಾರೆ. ಅಂತವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಖಾಪುರದ ಶ್ರೀ ಡಾ.ಸಿದ್ಧರಾಮ ಶಿವಾಚಾರ್ಯರು, ಸೊನ್ನದ ಶ್ರೀ ಡಾ.ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಅಲ್ಲಮಪ್ರಭು ಪಾಟೀಲ್, ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್, ಪ್ರಮುಖರಾದ ಡಾ.ಕೇದಾರಲಿಂಗಯ್ಯ ಹಿರೇಮಠ, ರಾಜಶೇಖರ ಸೀರಿ, ಡಾ.ಎಸ್.ಎಸ್.ಗುಬ್ಬಿ, ರಮೇಶಬಾಬು ವಕೀಲ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ದಯಾನಂದ ದೇವರಮನಿ, ಮಲ್ಲಿಕಾರ್ಜುನಗೌಡ ಪಾಟೀಲ್ ಬಿರಾಳ, ಚಂದ್ರಶೇಖರ ತುಂಬಗಿ , ಅಬ್ದುಲ್ ರಹಿಮಾನ ಪಟೇಲ್, ಪ್ರತಾಪ ಕಟ್ಟಿ, ದಾನಪ್ಪಗೌಡ ಹಳಿಮನಿ, ಶಂಕರಗೌಡ ಹಾಲಗಡ್ಲಾ, ಚಂದ್ರಶೇಖರ ಹರನಾಳ, ಸುದೀಂದ್ರ ವಕೀಲ, ಮರೇಪ್ಪ ಬಡಿಗೇರ, ಡಾ.ಧರ್ಮಣ್ಣ ಬಡಿಗೇರ, ಎಸ್.ಟಿ.ಬಿರಾದಾರ, ಎ.ಸಿ.ಹಾರವಾಳ, ಬಂಗಾರೆಪ್ಪ ಆಡೀನ್, ಸುನಂದ ಕಲ್ಲಾ, ಕವಿತಾ ಹಳ್ಳಿ, ಭಗವಂತರಾಯ ಬೆಣ್ಣುರ,ಪರಮೇಶ್ವರ ಬಿರಾಳ, ಪ್ರಕಾಶ ಫುಲಾರಿ ಇತರರಿದ್ದರು.
ಡಾ.ಧರ್ಮಣ್ಣ ಬಡಿಗೇರ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎಸ್.ಕೆ.ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು. ಸುನಂದಾ ಕಲ್ಲಾ ನಿರೂಪಣೆ ಮಾಡಿದರು. ಬಸವರಾಜ ಹಡಪದ ವಂದಿಸಿದರು.
8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಗೋವಿಂದರಾಜ ಆಲ್ದಾಳ ಅವರನ್ನು ಅಲಂಕೃತ ಸಾರೋಟದಲ್ಲಿ ಕೂರಿಸಿ ಅದ್ದೂರಿ ಮೆರವಣಿಗೆ ಮೂಲಕ ಪ್ರಧಾನ ವೇದಿಕೆಗೆ ಕರೆತರಲಾಯಿತು. ಬೆಳಗ್ಗೆ 10.30ಕ್ಕೆ ಮಿನಿ ವಿಧಾನಸೌಧ ಬಳಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅವರು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಪ್ರಮುಖ ರಸ್ತೆ ಮೂಲಕ ಹಳೇ ತಹಸಿಲ್ ಕಚೇರಿವರೆಗೂ ಮೆರವಣಿಗೆ ಸಾಗಿತು. ದಾರಿಯುದ್ದಕ್ಕೂ ಕನ್ನಡ ಧ್ವಜಗಳು ರಾರಾಜಿಸಿದವು. ಕನ್ನಡಪರ ಜೈೂಷಗಳು ಮೊಳಗಿದವು. ವಿವಿಧ ಶಾಲಾ&ಕಾಲೇಜುಗಳ ವಿದ್ಯಾರ್ಥಿಗಳು ಕನ್ನಡ ಬಾವುಟದೊಂದಿಗೆ ಗಮನಸೆಳೆದರು. ಕೋಲಾಟ, ಡೊಳ್ಳಿನ ನೃತ್ಯ, ಭಜನಾ ಮೇಳ, ಭೂತೆ ನೃತ್ಯ, ಕರಡಿ ಮಜಲು, ಚೌಡಕಿ ನೃತ್ಯ ಸೇರಿ ಹಲವು ಕಲಾಪ್ರದರ್ಶಗಳು ಮನಸೂರೆಗೊಂಡವು.
ಹೈದರಾಬಾದ್ ಕರ್ನಾಟಕ ಚಳವಳಿಯಲ್ಲಿ ಜೇವರ್ಗಿ& ಯಡ್ರಾಮಿ ಅವಳಿ ತಾಲೂಕುಗಳ ಶಕ್ತಿ ಸಿಂಹಪಾಲಾಗಿದೆ. ಇಲ್ಲಿಯ ಅನೇಕ ಹೋರಾಟಗಾರರು ರಜಾಕಾರರ ವಿರುದ್ಧ ಹೋರಾಡಿ ಪ್ರಾಣ ಬಿಟ್ಟಿದ್ದಾರೆ. ಸರ್ದಾರ್ ಶರಣಗೌಡ ಇನಾಮದಾರ, ಚನ್ನಬಸಪ್ಪ ಕುರಳಗೇರಾ, ನೀಲಕಂಠಪ್ಪ ದೇವರಮನಿ, ದತ್ತಾತ್ರೇಯರಾವ್ ಅವರಾದಿ, ಶಿವಣ್ಣ ಸಾಹು ಕಂದಗಲ್... ಸೇರಿ ಅನೇಕರು ಹೋರಾಟದ ಮುಂಚೂಣಿಯಲ್ಲಿದ್ದರು. ಶರಣ ಪರಂಪರೆ ಆಂದೋಲಾದ ಶ್ರೀ ಕರುಣೇಶ್ವರರು, ಗಂವ್ಹಾರದ ಶ್ರೀ ವಿಶ್ವಾರಾಧ್ಯರು, ಕೋಳಕೂರಿನ ಶ್ರೀ ಸಿದ್ಧಬಸವೇಶ್ವರರು ಈ ನೆಲದ ಬೆಳಕು. ಮಹಾತ್ಮರ ಆದರ್ಶ ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದು ಸರ್ವಾಧ್ಯಕ್ಷ ಡಾ.ಗೋವಿಂದರಾಜ ಆಲ್ದಾಳ ಹೇಳಿದರು.
ಕನ್ನಡ ಭಾಷೆಯನ್ನು ಉಳಿಸುವುದೆಂದರೆ ನಮ್ಮ ಸಂಸತಿ, ಅಸ್ಮಿತೆ ಮತ್ತು ಇತಿಹಾಸದ ಜೀವಂತ ನೆನಪುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದಾಗಿದೆ. ಸಗರನಾಡು ಎಂದೇ ಹೆಸರಾಗಿರುವ ಜೇವರ್ಗಿ ತಾಲೂಕು ಸೂಫಿ ಸಂತರು, ಶರಣರು, ತತ್ವಪದಕಾರರು, ದಾರ್ಶನಿಕರು ಹಾಗೂ ಜನಪದ ಸಂಸತಿಯ ಸಂಗಮಭೂಮಿಯಾಗಿದೆ. ಈ ಭಾಗದ ವಚನ, ತತ್ವಪದ ಮತ್ತು ಜನಪದ ಪರಂಪರೆಯನ್ನು ದಾಖಲಿಸಿ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಇನ್ನಷ್ಟು ವ್ಯಾಪಕವಾಗಿ ನಡೆಯಬೇಕು.> ಡಾ.ಅಜಯ್ ಧರ್ಮಸಿಂಗ್ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ