ಕಲಬುರಗಿ: ನಾವಿನ್ಯತೆ ಮಹತ್ವ ಒತ್ತಿ ಹೇಳಿ ವಿದ್ಯಾರ್ಥಿಗಳು ಹಾಗೂ ಸಂಶೋಧಕರು ತಮ್ಮ ಆಲೋಚನೆಗಳನ್ನು ಅರ್ಥಪೂರ್ಣ ಮತ್ತು ಸಾಮಾಜಿಕವಾಗಿ ಪ್ರಸ್ತುತ ಪರಿಹಾರಗಳಾಗಿ ರೂಪಿಸುವಂತೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಸಿಯುಕೆ ಕಂಪ್ಯೂಟರ್ ವಿಜ್ಞಾನಗಳ ನಿಕಾಯ ಹಾಗೂ ಸಂಸ್ಥೆಯ ನಾವಿನ್ಯತಾ ಮಂಡಳಿಯಿಂದ ಕೃತಕ ಬುದ್ಧಿಮತ್ತೆ , ಡೇಟಾ ವಿಜ್ಞಾನ, ನಾವಿನ್ಯತೆ ಹಾಗೂ ಮಾನವ ಎಐ ಸಂಬಂಧ ಕುರಿತು ಏರ್ಪಡಿಸಿದ್ದ ಎರಡು ದಿನದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು, ಸೇವಾ ಪೋರ್ಟಲ್ ನಾವಿನ್ಯತೆ ಮತ್ತು ಸಹಭಾಗಿತ್ವ ಉತ್ತೇಜಿಸುವ ಪ್ರಮುಖ ವೇದಿಕೆಯಾಗಿದೆ ಎಂದರು.
ನವದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಂಪ್ಯೂಟರ್ ಮತ್ತು ಸಿಸ್ಟಮ್ಸ್ ಸೈನ್ಸಸ್ ನಿಕಾಯದ ಪ್ರೊ.ಟಿ.ವಿ. ವಿಜಯ ಕುಮಾರ್ ದತ್ತಾಂಶದಿಂದ ಜ್ಞಾನದವರೆಗೆ: ಎಐ ಮತ್ತು ಡೇಟಾ ವಿಜ್ಞಾನದ ಶಕ್ತಿ ಹಾಗೂ ಪ್ರಕೃತಿಯಿಂದ ಪ್ರೇರಿತ ಕಂಪ್ಯೂಟಿಂಗ್ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಸಿಯುಕೆ ಕಂಪ್ಯೂಟರ್ ವಿಜ್ಞಾನಗಳ ನಿಕಾಯ ಡೀನ್ ಪ್ರೊ.ಆರ್.ಎಸ್. ಹೆಗಡಿ, ಐಕ್ಯೂಎಸಿ ನಿರ್ದೇಶಕ ಪ್ರೊ.ಅಮರೇಂದ್ರ ಮತ್ಸಾ, ಭೌತ ವಿಜ್ಞಾನಗಳ ನಿಕಾಯದ ಡೀನ್ ಪ್ರೊ.ರಾಜೀವ್ ಶೇಷ ಜೋಶಿ, ಸಾಮಾಜಿಕ ಮತ್ತು ವರ್ತನಾ ವಿಜ್ಞಾನಗಳ ನಿಕಾಯದ ಡೀನ್ ಪ್ರೊ.ಪವಿತ್ರಾ ಆಲೂರು ಹಾಗೂ ಸಿಯುಕೆ ನಾವಿನ್ಯತಾ ಮಂಡಳಿ ನೋಡಲ್ ಅಧಿಕಾರಿ ಡಾ.ರೋಹಿತ್ ಕುಮಾರ್ ಇತರರಿದ್ದರು. ಪ್ಯಾನಲ್ ಸದಸ್ಯರು ಮಾನವ ಬುದ್ಧಿಶಕ್ತಿ, ಸೃಜನಶೀಲತೆ ಮತ್ತು ಎಐ ನಡುವಿನ ಸಂಬಂಧದ ಕುರಿತು ತಮ್ಮ ಅನಿಸಿಕೆ ಹಂಚಿಕೊಂಡರು.