ಕಲಬುರಗಿ: ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ನತೆ, ಹಕ್ಕು ಮತ್ತು ಗೌಪ್ಯತೆ ರಸಲು ಕಾನೂನಿನಲ್ಲಿ ಅವಕಾಶಗಳಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಸಹಯೋಗದಡಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯ ವಿಭಾಗ ಮಂಗಳವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನಸಿಕ ಆರೋಗ್ಯ ಆರೈಕೆ ಕಾಯ್ದೆ-2017ರಡಿ ಲಭ್ಯವಿರುವ ಚಿಕಿತ್ಸೆ, ಗೌಪ್ಯತೆ ರಕ್ಷಣೆ, ಸಮಾನತೆ, ವೈದ್ಯಕಿಯ ದಾಖಲೆಗಳ ಸಂರಕ್ಷಣೆ ಹಾಗೂ ಉಚಿತ ಕಾನೂನು ನೆರವು ಸೇರಿ ವಿವಿಧ ಕಾನೂನುಬದ್ಧ ಹಕ್ಕುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಗೌರವದಿಂದ ಕಾಣಬೇಕು. ಅವರು ತಮ್ಮ ಹಕ್ಕುಗಳ ಅರಿವು ಹೊಂದಿರಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಯುಕೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಒತ್ತಡ, ದುಶ್ಚಟ ಅಥವಾ ಇತರ ಯಾವುದೇ ಕಾರಣದಿಂದ ಮಾನಸಿಕವಾಗಿ ಬಳಲುತ್ತಿದ್ದರೆ ಭಯಪಡದೆ ವಿಶ್ವವಿದ್ಯಾಲಯದ ಮಾನಸಿಕ ಆರೋಗ್ಯ ಆಪ್ತ ಸಮಾಲೋಚನಾ ಕೇಂದ್ರದ ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ರವಿಕಾಂತಿ ಕ್ಯಾತನಾಳ ಮಾತನಾಡಿ, ವಿದ್ಯಾರ್ಥಿಗಳು ಒತ್ತಡವನ್ನು ಸಮರ್ಥವಾಗಿ ನಿಭಾಯಿಸಲು ತಾಳ್ಮೆ, ಮನಃಶಾಂತಿ, ದೈಹಿಕ ವ್ಯಾಯಾಮ, ನಡಿಗೆ ಮತ್ತು ಉತ್ತಮ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿದ್ದ ಜಿಮ್ಸ್ ಆಸ್ಪತ್ರೆ ಮನೋವೈದ್ಯಶಾಸ ವಿಭಾಗದ ಮುಖ್ಯಸ್ಥ ಡಾ.ಪ್ರಭುಕಿರಣ ಗೋಗಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಇರ್ಫಾನ್ ಮಹಾಗಾವಿ ಅವರು ಮಾನಸಿಕ ಆರೋಗ್ಯದ ಮಹತ್ವ, ಮಾನಸಿಕ ಸಮಸ್ಯೆ ಕುರಿತು ಜಾಗೃತಿ ಮತ್ತು ವಿದ್ಯಾರ್ಥಿಗಳು ಎದುರಿಸುವ ಮಾನಸಿಕ ಆರೋಗ್ಯ ಸವಾಲು ಗುರುತಿಸಿ ನಿಭಾಯಿಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ವಿವಿ ಪ್ರಾಧ್ಯಾಪಕರಾದ ಪ್ರೊ.ವಿಜಯೇಂದ್ರ ಪಾಂಡೆ, ಪ್ರೊ.ಚನ್ನವಿರ ಆರ್.ಎಂ., ಪ್ರೊ.ಜಯವೇಲ್, ಪ್ರೊ.ವೆಂಕಟರಾವ ಪಲಾಟೆ, ಡಾ.ಅಸ್ತಾ, ಡಾ.ಭಾಗ್ಯಶ್ರೀ, ಡಾ.ರವಿ ಕಾಂಗೈ, ಡಾ.ಶ್ರೀಲಕ್ಷಿ$್ಮ, ಡಾ.ವಾಣಿಶ್ರೀ, ಡಾ.ರಾವೇಂದ್ರ ಬೋನಾಳ, ಡಾ.ಯಧುಕೃಷ್ಣನ್ ಹಾಗೂ ಡಾ.ಮಹಾಲಕ್ಷ್ಮೀ ಕೆ.ಆರ್. ಇತರರಿದ್ದರು. ಪ್ರೊ.ಪವಿತ್ರಾ ಆಲೂರು ಸ್ವಾಗತಿಸಿದರು. ಡಾ.ಶಿವಮೂರ್ತಿ ಸಂಯೋಜಿಸಿದರು.
ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ನಿರ್ದೇಶನದಂತೆ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಆಪ್ತ ಸಮಾಲೋಚಕರನ್ನು ನೇಮಿಸಲಾಗಿದೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಅಗತ್ಯವಿದ್ದಾಗ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ಪಡೆಯಬೇಕು.> ಪ್ರೊ.ಬಟ್ಟು ಸತ್ಯನಾರಾಯಣ ಕುಲಪತಿ, ಸಿಯುಕೆ