ಕಲಬುರಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆಯಲ್ಲಿ ವೈದ್ಯಕೀಯ ಅಧಿಕಾರಿಗಳು, ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿಸಿ ಫೌಜಿಯಾ ತರನ್ನುಮ್, ಸಿಇಒ ಭಂವರಸಿAಗ್ ಮೀನಾ, ಡಾ.ಶರಣಬಸಪ್ಪ ಕ್ಯಾತನಾಳ್, ಡಾ.ಚಂದ್ರಕಾAತ ನರಬೋಳಿ, ಡಾ.ಲಾವಣ್ಯ ಪೀಟರ್, ಡಾ.ಶರಣಬಸಪ್ಪ ಗಣಜಲಖೇಡ್, ಡಾ.ಎ.ಎಸ್.ರುದ್ರವಾಡಿ ಇತರರಿದ್ದರು. 
ಕಲಬುರಗಿ

ಕ್ಷಯಮುಕ್ತ ಕಲಬುರಗಿಯತ್ತ ದಿಟ್ಟ ಹೆಜ್ಜೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿಕೆ
  • ೭೯ ಗ್ರಾಮ ಪಂಚಾಯಿತಿ ಕ್ಷಯಮುಕ್ತ
ಕಲಬುರಗಿ: ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ಸಂಪೂರ್ಣ ನಿರ್ಮೂಲನೆ ಮಾಡಲು ಕೈಗೊಂಡಿರುವ ಕ್ರಮಗಳು ಯಶಸ್ವಿಯಾಗುತ್ತಿದ್ದು, ಸಾರ್ವಜನಿಕರಲ್ಲಿ ಈ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಬಿ. ಫೌಜೀಯಾ ತರನ್ನುಮ್ ಹೇಳಿದರು.
ಜಿಲ್ಲಾ ಪಂಚಾಯಿತಿ ಹಳೇ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕಚೇರಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಿಶ್ವ ಕ್ಷಯರೋಗ ದಿನಾಚರಣೆ, ಕ್ಷಯ ಮುಕ್ತ ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ ಪ್ರದಾನ ಮತ್ತು ಟಿಬಿ ಮುಕ್ತ ಭಾರತ ಅಭಿಯಾನ ೧೦೦ ದಿನಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ೭೯ ಗ್ರಾಮ ಪಂಚಾಯಿತಿಗಳು ಕ್ಷಯಮುಕ್ತ ಎಂದು ಘೋಷಣೆಯಾಗಿವೆ ಎಂದರು.
ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗಕ್ಕೆ ಉಚಿತ ಚಿಕಿತ್ಸೆ ಮತ್ತು ಪರೀಕ್ಷೆ ಲಭ್ಯವಿದೆ. ಸತತ ಎರಡು ವಾರ ಕೆಮ್ಮು ಇದ್ದಲ್ಲಿ ತಕ್ಷಣ ಕಫ ಪರೀಕ್ಷೆ ಮಾಡಿಸಿಕೊಳ್ಳಬೇಕು. ಚಿಕಿತ್ಸೆ ಯಶಸ್ಸಿನ ಪ್ರಮಾಣ ಶೇ.೯೦ಕ್ಕೂ ಹೆಚ್ಚಿದೆ. ಪ್ರತಿ ವರ್ಷ ಸುಮಾರು ೮೦ ರಿಂದ ೯೦ ಸಾವಿರ ಪರೀಕ್ಷೆ ನಡೆಸಲಾಗುತ್ತಿದ್ದು, ಹೆಚ್ಚಿನ ಜನರನ್ನು ಗುರುತಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಚಂದ್ರಕಾAತ ನರಬೋಳಿ ಪ್ರಾಸ್ತಾವಿಕ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯು ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ರಾಜ್ಯದ ಸರಾಸರಿ ಮಟ್ಟ ತಲುಪುವಲ್ಲಿ ಯಶಸ್ವಿಯಾಗಿದೆ. ೨೦೨೨ರಲ್ಲಿ ರಾಜ್ಯ ಮಟ್ಟದಲ್ಲಿ ೩೧ನೇ ಸ್ಥಾನದಲ್ಲಿದ್ದ ಕಲಬುರಗಿ, ನಿರಂತರ ಪ್ರಯತ್ನದ ಫಲವಾಗಿ ಇಂದು ೧೪-೧೫ನೇ ಸ್ಥಾನಕ್ಕೆ ಏರಿದೆ. ಪ್ರಸ್ತುತ ಜಿಲ್ಲೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಪ್ರಕರಣ ಗುರುತಿಸಲಾಗುತ್ತಿದೆ ಎಂದರು.
ಜಿಪA ಸಿಇಒ ಭಂವರಸಿAಗ್ ಮೀನಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಡಾ.ಎ.ಎಸ್.ರುದ್ರವಾಡಿ, ಡಾ.ಶರಣಬಸಪ್ಪ ಗಣಜಲಖೇಡ, ತಾಲೂಕು ಆರೋಗ್ಯಾಧಿಕಾರಿ ಡಾ.ಮಾರುತಿ ಕಾಂಬಳೆ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ರಾಕೇಶ ಕಾಂಬಳೆ, ಸರ್ಕಾರಿ ಆಸ್ಪತ್ರೆ ಆರ್‌ಎಂಒ ಡಾ.ಓಂಪ್ರಕಾಶ ಅಂಬೂರೆ ಇತರರಿದ್ದರು.
ಇಎಸ್‌ಐಸಿ ಆಸ್ಪತ್ರೆ ಕ್ಷಯರೋಗ ನೋಡಲ್ ಅಧಿಕಾರಿ ಡಾ.ಲಾವಣ್ಯ ಪೀಟರ್ ಉಪನ್ಯಾಸ ನೀಡಿದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಚಂದ್ರಕಾAತ ನರಬೋಳಿ ಪ್ರಾಸ್ತಾವಿಕ ಮಾತನಾಡಿದರು. ಜಾಗೃತಿ ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ್ ನವಲೆ ಚಾಲನೆ ನೀಡಿದರು.

ರೋಗಮುಕ್ತ ಗ್ರಾಪಂಗಳ ಸಂಖ್ಯೆ ಹೆಚ್ಚಳ

ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗಾಗಿ ಹಮ್ಮಿಕೊಳ್ಳಲಾದ ಟಿಬಿ ಮುಕ್ತ ಪಂಚಾಯಿತಿ ಅಭಿಯಾನ ಉತ್ತಮ ಫಲಿತಾಂಶ ನೀಡುತ್ತಿದ್ದು, ಈ ವರ್ಷ ಜಿಲ್ಲೆಯ ಒಟ್ಟು ೪೩ ಗ್ರಾಮ ಪಂಚಾಯಿತಿಗಳನ್ನು ಕ್ಷಯಮುಕ್ತ ಎಂದು ಘೋಷಿಸಲಾಗಿದೆ. ಕಳೆದ ವರ್ಷ ೩೬ ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತವಾಗಿದ್ದವು, ಈ ಬಾರಿ ಆ ಸಂಖ್ಯೆ ೪೩ಕ್ಕೆ ಏರಿರುವುದು ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿನ ಪ್ರಗತಿ ತೋರಿಸುತ್ತದೆ. ಈವರೆಗೆ ಅಂದಾಜು ೮೭,೦೦೦ಕ್ಕೂ ಹೆಚ್ಚು ಶಂಕಿತ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ನಿಗದಿಪಡಿಸಿದ ಗುರಿಗಿಂತಲೂ ಹೆಚ್ಚಿನ ಸಾಧನೆಯಾಗಿದೆ. ಕ್ಷಯ ಕೇವಲ ಆರೋಗ್ಯ ಇಲಾಖೆ ಜವಾಬ್ದಾರಿಯಲ್ಲ, ಇದು ಸಾಮಾಜಿಕ ಹೊಣೆಗಾರಿಕೆ. ರೋಗ ಲಕ್ಷಣವಿರುವವರನ್ನು ಆರಂಭಿಕ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಕೊಡಿಸುವುದು ಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ಸಿAಗ್ ಮೀನಾ ಸಲಹೆ ನೀಡಿದರು.

ವೈದ್ಯಾಧಿಕಾರಿ, ಗ್ರಾಪಂಗಳಿಗೆ ಪ್ರಶಸ್ತಿ

ವಿಶ್ವ ಕ್ಷಯರೋಗ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ವೈದ್ಯಕೀಯ ಅಧಿಕಾರಿಗಳು ಹಾಗೂ ಪಂಚಾಯಿತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಿರಾಚಂದ್ ಮತ್ತು ಚಿಮ್ಮಾಇದಲಾಯಿ ಗ್ರಾಮ ಪಂಚಾಯಿತಿಗಳು ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನದ ಪದಕ, ಮೊಘಾ (ಕೆ), ಟೇಂಗಳಿ, ಅನೂರ ಗ್ರಾಪಂಗಳು ಬೆಳ್ಳಿ ಪದಕ, ಸುಂಟನೂರ, ನಿಂಬರ್ಗಾ, ಕೊರಳ್ಳಿ, ಧುತ್ತರಗಾಂವ್ ಸೇರಿ ಒಟ್ಟು ೩೮ ಗ್ರಾಮ ಪಂಚಾಯಿತಿಗಳು ಕಂಚಿನ ಪದಕ ಮುಡಿಗೇರಿಸಿಕೊಂಡಿವೆ.
"

ಕ್ಷಯರೋಗ ಸ್ಪರ್ಶದಿಂದ ಹರಡುವುದಿಲ್ಲ. ಆದರೆ ಸಮಾಜದಲ್ಲಿ ರೋಗಿಗಳ ಬಗ್ಗೆ ಇರುವ ತಾರತಮ್ಯ ಮತ್ತು ಭಯ ಹೋಗಲಾಡಿಸಬೇಕಿದೆ. ರೋಗಿಗಳಿಗೆ ಕುಟುಂಬದ ಬೆಂಬಲ ಅಗತ್ಯ. ನಿಕ್ಷಯ ಮಿತ್ರ ಯೋಜನೆಯಡಿ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್, ಪ್ರೊಟೀನ್ ಫೌಡರ್ ನೀಡುತ್ತಿರುವ ಖಾಸಗಿ ವೈದ್ಯರು, ಆಸ್ಪತ್ರೆಗಳು ಮತ್ತು ಸಂಘ-ಸAಸ್ಥೆಗಳ ಕಾರ್ಯ ಶ್ಲಾಘನೀಯ.

| ಬಿ.ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ