ಕಲಬುರಗಿಯಲ್ಲಿ ಕೋಲಿ ಸಮಾಜದ ಪ್ರತಿಭಟನೆ 
ಕಲಬುರಗಿ

ರಾಜ್ಯ ಸರ್ಕಾರದ ವಿರುದ್ಧ ಕೋಲಿ ಸಮಾಜ ಕಿಡಿ: ಎಸ್​ಟಿ ಸೇರ್ಪಡೆಗೆ ಆಗ್ರಹ

ರಮೇಶ ಮೇಳಕುಂದಾ
ಕಲಬುರಗಿ: ಕೋಲಿ, ಕಬ್ಬಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪರಿಷತ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ಆಗ್ರಹಿಸಿ ನಗರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕೋಲಿ ಸಮಾಜದಿಂದ ಸೋಮವಾರ ಬೃಹತ್​ ಪ್ರತಿಭಟನೆ ನಡೆಸಲಾಯಿತು.
ಕಲಬುರಗಿ, ಬೀದರ್​, ಯಾದಗಿರಿ, ರಾಯಚೂರು, ವಿಜಯಪುರ, ಬಾಗಕೋಟೆ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಹಸ್ರಾರು ಕೋಲಿ ಸಮಾಜದವರು, ಪ್ರಸ್ತಾವನೆ ಕಳುಹಿಸಲು ವಿಳಂಬ ಮಾಡುತ್ತಿರುವವ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟಗಾರ ಶಿವಕುಮಾರ ನಾಟೀಕಾರ ಮಾತನಾಡಿ, ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಹಾಗೂ ಬಾರ್ಕಿ ಎಂಬ ಪರ್ಯಾಯ ಪದಗಳನ್ನು ಒಳಗೊಂಡಂತೆ ಸಮುದಾಯವನ್ನು ಎಸ್​ಟಿ ಪಟ್ಟಿಗೆ ಸೇರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಗಂಗಾಮತ ಪದವನ್ನು ಹೊಂದಿದ್ದ ಪ್ರಸ್ತಾವನೆಯನ್ನು ರದ್ದುಪಡಿಸಬೇಕು, ಹೊಸದಾಗಿ ಐದು ಪದಗಳ ಬಗ್ಗೆ ಸೂಕ್ತ ವೈಜ್ಞಾನಿಕ, ದಾಖಲಾತಿಗಳನ್ನು ಅನುಸರಿಸಿ ಹೊಸ ಪ್ರಸ್ತಾವನೆಯನ್ನು ಶ್ರೀ ಕಳುಹಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ಸಮಾಜಕ್ಕೆ ನ್ಯಾಯ ಒದಗಿಸಬೇಕು. ಎರಡು ವರ್ಷವಾದರೂ ಪ್ರಸ್ತಾವನೆ ಸಲ್ಲಿಸದೇ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ಬಾರಿ ಯಾವುದೇ ಕಾರಣಕ್ಕೂ ಪ್ರಸ್ತಾವನೆ ವಾಪಸ್​ ಬರದಂತೆ ಸೂಕ್ತ ಅಧ್ಯಯನ ಸಮಿತಿ ರಚಿಸಿ, ಹೊಸ ಪ್ರಸ್ತಾವನೆ ಕಳುಹಿಸಬೇಕು, ಅಧ್ಯಯನಕ್ಕೆ ಹಣ ಮೀಸಲಿಡಬೇಕು ಎಂದು ಮನವಿ ಮಾಡಿದರು.
ಸಚಿವ ಪ್ರಿಯಾಂಕ್​ ರ್ಖಗೆ, ಮಲ್ಲಿಕಾರ್ಜುನ ರ್ಖಗೆ ಕೋಲಿ ಸಮಾಜದ ಮತ ಪಡೆದು, 40 ವರ್ಷದಿಂದ ಆಡಳಿತ ನಡೆಸುತ್ತಿದ್ದರೂ ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಗತ್​ ವೃತ್ತದಿಂದ ಸುಮಾರು 15 ಸಾವಿರ ಜನರು ಬೃಹತ್​ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ರಸ್ತೆಯಲ್ಲೇ ಕುಳಿತು ರಾತ್ರಿ 8ಗಂಟೆವರೆಗೆ ಸುದೀರ್ ಪ್ರತಿಭಟನೆ ನಡೆಯಿತು. ಜಗದ್ಗುರು ಶ್ರೀ ಶಾಂತಭೀಷ್ಮ ಸ್ವಾಮೀಜಿ, ಶ್ರೀ ಮಲ್ಲಣ್ಣಪ್ಪ ಸ್ವಾಮೀಜಿ, ವಿಧಾನ ಪರಿಷತ್​ ಮುಖ್ಯ ಸಚೇತಕ ಎನ್​.ರವಿಕುಮಾರ, ಸದಸ್ಯ ಡಾ.ಸಾಬಣ್ಣ ತಳವಾರ, ಪ್ರಮುಖರಾದ ಶೋಭಾ ಬಾಣಿ, ಶರಣಪ್ಪ ತಳವಾರ, ಶಿವರಾಜ ಮೆಟಗಾರ, ರವಿ ಕೊರವಿ, ಜಗನ್ನಾಥ ಜಮಾದಾರ, ಪಿಡ್ಡಪ್ಪ ಜಾಲಗಾರ ಸೇರಿ ಸಹಸ್ರಾರು ಜನರು ಭಾಗವಹಿಸಿದ್ದರು.